ದೆಹಲಿ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ಕೆ.ಸುಧಾರಾವ್
ನವದೆಹಲಿ: ದಿಲ್ಲಿಯಲ್ಲಿ ಏಪ್ರಿಲ್ 6-7ರಂದು 'ದೆಹಲಿ ಕನ್ನಡಿಗ' ಪತ್ರಿಕೆ ಏರ್ಪಡಿಸಿರುವ 30ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ಕರ್ನಾಟಕ ಮುಕ್ತ ವಿ.ವಿ. ಮಾಜಿ ಕುಲಪತಿಗಳು, ಲೇಖಕರೂ ಆದ ಡಾ. ಕೆ. ಸುಧಾರಾವ್ ಅವರು ಆಯ್ಕೆಯಾಗಿದ್ದು ಸಮ್ಮೇಳನದ ಉದ್ಘಾಟನೆಯನ್ನು ಧರ್ಮಾಧಿಕಾರಿ ಪದ್ಮಭೂಷಣ ಡಾ. ಡಿ. ವೀರೇದ್ರ ಹೆಗ್ಗಡೆ ಅವರು ನೆರವೇರಿಸಲಿದ್ದಾರೆ ಎಂದು ಸಮ್ಮೇಳನದ ಸಂಚಾಲಕ ಬಾ. ಸಾಮಗ ಅವರು ಇಲ್ಲಿ ಪ್ರಕಟಿಸಿದ್ದಾರೆ.
ರಾಣಿ ಚೆನ್ನಮ್ಮ ವಿ.ವಿ. ಕುಲಪತಿ ಪ್ರೊ. ಬಿ.ಆರ್. ಅನಂತನ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿರುವರು. ಸಮ್ಮೇಳನದ ವಿವಿಧ ಕಾರ್ಯಕ್ರಮಗಳನ್ನು ಲೇಖಕ, ಇಲಾಖೆಯ ಆಯುಕ್ತ ಡಾ. ಸಿ. ಸೋಮಶೇಖರ್, ಖ್ಯಾತ ಸುಗಮ ಸಂಗೀತಗಾರ ಶಿವಮೊಗ್ಗ ಸುಬ್ಬಣ್ಣ, ಸರ್ಕಾರದ ಮಾಜಿ ಕಾರ್ಯದರ್ಶಿ ಡಾ. ಬಿ.ಡಿ. ಶಣೈ, ಲೇಖಕಿ ಡಾ. ವಿನೋದಬಾಯಿ, ಆಕಾಶವಾಣಿ ಉಪಮಹಾ ನಿರ್ದೇಶಕ ಡಾ. ವಾಗೀಶ್ ನಡೆಸಲಿದ್ದಾರೆ. ಸಮ್ಮೇಳನದಲ್ಲಿ ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಅಧ್ಯಕ್ಷ ಎಂ. ನರೇಂದ್ರ ಅವರು ಶ್ರೇಷ್ಠ ಬ್ಯಾಂಕರ್, ಶೈಕ್ಷಣಿಕ ಯೋಜನೆ ಮತ್ತು ಆಡಳಿತ ರಾಷ್ಟ್ರೀಯ ವಿವಿ ಕುಲಪತಿ ಪ್ರೊ. ಆರ್. ಗೋವಿಂದ ಅವರು ಶ್ರೇಷ್ಠ ಹೊರನಾಡ ಕನ್ನಡಿಗ, ಖ್ಯಾತ ವೈದ್ಯೆ ಡಾ. ಆರ್. ರತಿದೇವಿ ಅವರು ಶ್ರೇಷ್ಠ ಸಾಮಾಜಿಕ ಕಾರ್ಯಕರ್ತೆ. ದಿಲ್ಲಿಯಲ್ಲಿನ ಕರ್ನಾಟಕ ಸರ್ಕಾರದ ವಿಶೇಷ ಸಮನ್ವಯಾಧಿಕಾರಿ ಬೈಕೆರೆ ನಾಗೇಶ್ ಅವರು ಶ್ರೇಷ್ಠ ದಿಲ್ಲಿ ಕನ್ನಡಿಗ ಪ್ರಶಸ್ತಿಗಳನ್ನು ಸ್ವೀಕರಿಸಲಿರುವರು.
ಈ ಸಮ್ಮೇಳನದಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣಗಳು, ಕವಿಗೋಷ್ಠಿ, ಮಹಿಳಾ ಉತ್ಸವ ಸಂಗೀತ, ನೃತ್ಯ, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪುಸ್ತಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಕನ್ನಡಕ್ಕೆ ಇನ್ನೂ ಹೆಚ್ಚಿನ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗೌರವ, ಮಾನ್ಯತೆ ದೊರಕಿಸುವುದರೊಂದಿಗೆ ಕನ್ನಡಿಗರಿಗೆ ಸಿಗಬೇಕಾದ ಎಲ್ಲ ಹಕ್ಕುಗಳನ್ನು ದೊರಕಿಸುವುದೇ ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ ಎಂದು ಸಾಮಗ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.