ಬ್ರೆಜಿಲ್ ನೈಟ್ಕ್ಲಬ್ ಅಗ್ನಿ ದುರಂತ: 245 ಬಲಿ
ಬ್ರೆಸಿಲಿಯಾ: ದಕ್ಷಿಣ ಬ್ರೆಜಿಲ್ನ ನೈಟ್ಕ್ಲಬ್ವೊಂದರಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ 245 ಮಂದಿ ಮೃತಪಟ್ಟಿದ್ದಾರೆ. 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ರಾತ್ರಿ 2.30ರ ವೇಳೆಗೆ ಕಿಸ್ಕ್ಲಬ್ನಲ್ಲಿ 2000 ಮಂದಿ ಸೇರಿದ್ದರು. ಈ ವೇಳೆ ದಿಢೀರ್ ಈ ಅನಾಹುತ ಸಂಭವಿಸಿದೆ. ದುರಂತಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ಆದರೆ, ಕೆಲವು ಮೂಲಗಳ ಪ್ರಕಾರ ಮ್ಯೂಸಿಕ್ ಬ್ಯಾಂಡ್ ಪ್ರದರ್ಶನ ವೇಳೆ ಸಿಡಿಸಿದ ಸಿಡಿಮದ್ದಿನಿಂದಾಗಿ ಈ ದುರ್ಘಟನೆ ಸಂಭಸಿದೆ ಎಂದು ಹೇಳಲಾಗಿದೆ.
ಸ್ಥಳೀಯ ಪತ್ರಿಕೆಗಳ ಪ್ರಕಾರ ಭಾನುವಾರ ಬೆಳಗಿನ ಜಾವ 2 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಮೂರು ಸಾವಿರ ಮಂದಿ ಸೇರಬಹುದಾದಷ್ಟು ಸಾಮರ್ಥ್ಯದ ಈ ನೈಟ್ಕ್ಲಬ್ನಲ್ಲಿ ಇದ್ದದ್ದು ಒಂದೇ ನಿರ್ಗಮನ ದಾರಿ. ಅಲ್ಲದೆ, ಅಲ್ಲಿ ಸೇರಿದ್ದ ಬಹುತೇಕರಿಗೆ ತುರ್ತು ನಿರ್ಗಮನ ವ್ಯವಸ್ಥೆ ಎಲ್ಲಿದೆಯೆಂಬುದೇ ಗೊತ್ತಿರಲಿಲ್ಲ.ಇದರಿಂದಾಗಿ ಹಲವರಿಗೆ ಸುರಕ್ಷಿತವಾಗಿ ಹೊರಬರಲು ಸಾಧ್ಯವಾಗಲಿಲ್ಲ.
ಈ ವೇಳೆ, ಬೆಂಕಿಯ ಜತೆಗೆ ದಟ್ಟ ಹೊಗೆ ತೀವ್ರವಾಗಿ ವ್ಯಾಪಿಸಿದ್ದರಿಂದ ಉಸಿರಾಡಲು ಸಾಧ್ಯವಾಗದೆ ಬಹುತೇಕರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದೂ ಪೊಲೀಸರು ಹೇಳಿದ್ದಾರೆ.
ಚಿಲಿ ಪ್ರವಾಸದಲ್ಲಿರುವ ಬ್ರೆಜಿಲ್ ಅಧ್ಯಕ್ಷ ದಿಲ್ಮಾ ರೂಸೆಫ್ ದುರಂತದ ಹಿನ್ನೆಲೆಯಲ್ಲಿ ಪ್ರವಾಸ ಮೊಟಕುಗೊಳಿಸಿ ಬ್ರೆಜಿಲ್ಗೆ ಹಿಂತಿರುಗಿದ್ದಾರೆ ಎನ್ನಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.