ದೆಹಲಿಯಲ್ಲಿ ಕಾಂಗ್ರೆಸ್ 'ರಾಜ್ಯ'ಕಾರಣ
ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳೆಯದಲ್ಲಿ ಬಿರುಸಿನ ಚಟುವಟಿಕೆ. ಹೈಕಮಾಂಡ್‌ನೊಂದಿಗೆ ಮಾತುಕತೆ, ಚರ್ಚೆ, ಸಮಾಲೋಚನಾ ಸಭೆಗಳು ನಡೆದಿವೆ. ಬಹುತೇಕ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು ತಮಗೆ, ತಮ್ಮ ಬೆಂಬಲಿಗರಿಗೆ ಟಿಕೆಟ್ ಗಿಟ್ಟಿಸುವ ಮಾರ್ಗೊಪಾಯಗಳನ್ನು ಹುಡುಕುತ್ತಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಚುನಾವಣೆ ಗೆಲ್ಲುವ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು. ವಿದೇಶಾಂಗ ಖಾತೆ ಮಾಜಿ ಸಚಿವ ಎಸ್.ಎಂ. ಕೃಷ್ಣ ಅವರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಚುನಾವಣಾ ಪ್ರಣಾಳಿಕೆ, ಟಿಕೆಟ್ ಹಂಚಿಕೆಗೆ ಅನುಸರಿಸಬಹುದಾದ ಮಾನದಂಡ ಹಾಗೂ ಪ್ರಚಾರ ತಂತ್ರಗಳ ಕುರಿತಂತೆ ಈ ಭೇಟಿ ವೇಳೆ ಚರ್ಚಿಸಲಾಗಿದೆ.
ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಗುರುವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯದ ಚುನಾವಣಾ ಸಂಬಂಧಿ ಮಾಹಿತಿಗಳನ್ನು ನೀಡಿದ್ದ ಉಭಯ ನಾಯಕರು ಸೋನಿಯಾ ಗಾಂಧಿ ಅವರಿಗೂ ಅದನ್ನು ವಿವರಿಸಿದರು. ಸೋನಿಯಾ ಗಾಂಧಿ ಅವರು ಎಲ್ಲ ವಿವರ ಆಲಿಸಿ, ಒಗ್ಗಟ್ಟಾಗಿ ಚುನಾವಣೆ ಎದುರಿಸುವಂತೆ ಉಪದೇಶ ನೀಡಿದ್ದಾರೆಂದು ತಿಳಿದು ಬಂದಿದೆ. ಸುಮಾರು ಮೂವತ್ತು ನಿಮಿಷ ಮಾತುಕತೆ ನಡೆದಿದೆ.
ಸಮನ್ವಯ ಸಮಿತಿಸಭೆ: ರಾತ್ರಿ ಎ.ಕೆ. ಆ್ಯಂಟನಿ ನೇತೃತ್ವದ ಸಮನ್ವಯ ಸಮಿತಿ ಸಭೆ ಸೇರಿ ಚುನಾವಣೆ ಕುರಿತಂತೆ ಸುಧೀರ್ಘ ಚರ್ಚೆ ನಡೆಸಿತು. ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಅವರು ರಚಿಸಿರುವ ಸಮನ್ವಯ ಸಮಿತಿಯ ಮೊದಲ ಸಭೆ ಇದು. ಸಭೆಯಲ್ಲಿ ಆ್ಯಂಟನಿ ಅವರೊಂದಿಗೆ ಅಂಬಿಕಾ ಸೋನಿ, ಕೇಂದ್ರ ಸಚಿವರಾದ ವಯಲಾರ್ ರವಿ, ಜಿತೇಂದ್ರ ಸಿಂಗ್, ಕರ್ನಾಟಕ ಉಸ್ತುವಾರಿ ಮಧುಸೂದನ ಮಿಸ್ತ್ರಿ, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.
ಸಭೆಯಲ್ಲಿ ಕರ್ನಾಟಕದ ಸ್ಥಿತಿಗತಿಗಳು, ಚುನಾವಣಾ ಅಂಕಿ-ಅಂಶಗಳ ಬಗ್ಗೆ ಪರಿಶೀಲಿಸಲಾಯಿತು. ನಂತರ ರಾಹುಲ್ ಗಾಂಧಿ ಅವರ ಸೂತ್ರಕ್ಕನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಕುರಿತಂತೆಯೂ ಚರ್ಚಿಸಲಾಗಿದೆ. ರಾಹುಲ್ ಗಾಂಧಿ ರೂಪಿಸಿರುವ ಸೂತ್ರಕ್ಕನುಗುಣವಾಗಿ ಶನಿವಾರ ಲುಸಿನೋ ಫೆಲೆರೋ ಅವರ ಅಧ್ಯಕ್ಷತೆಯ ಸ್ಕ್ರೀನಿಂಗ್ ಕಮಿಟಿ ಬೆಂಗಳೂರಿನಲ್ಲಿ ಸಭೆ ನಡೆಸಲಿದೆ. ಈ ಸಭೆ ನಂತರ ಎಲ್ಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಸಮಾಲೋಚಿಸಿ ಮಾಹಿತಿ ಎಲ್ಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಸಮಾಲೋಚಿಸಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಮಾರ್ಚ್ 26 ಮತ್ತು 27ರಂದು ಮತ್ತೆ ಸಭೆ ಸೇರುವ ಸಮಿತಿಯು ಅಭ್ಯರ್ಥಿಗಳ ಆಯ್ಕೆಯ ಮತ್ತೊಂದು ಹಂತದ ಪ್ರಕ್ರಿಯೆ ಪೂರ್ಣಗೊಳಿಸಲಿದೆ. ಆಲ್ಲಿ ಅಖೈರುಗೊಳಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಗೆ ರವಾನಿಸಲಾಗುತ್ತದೆ. ದೆಹಲಿಯಲ್ಲಿ ಸಮನ್ವಯ ಸಮಿತಿ ಮತ್ತೊಮ್ಮೆ ಪರಿಶೀಲಿಸಿದ ನಂತರ ಸೋನಿಯಾ ಗಾಂಧಿ ಮತ್ತು ಅಂತಿಮವಾಗಿ ರಾಹುಲ್ ಗಾಂಧಿ ಪಟ್ಟಿಗೆ ಅಂಕಿತ ಹಾಕಲಿದ್ದಾರೆ.
ಪಕ್ಷೇತರ ಶಾಸಕರು ಹಾಗೂ ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ಬರುವವರ ಕುರಿತಂತೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಈ ಬಗ್ಗೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಮತ್ತೊಂದು ಸುತ್ತು ಚರ್ಚಿಸಿದ ನಂತರವಷ್ಟೆ ಅಂತಿಮ ನಿರ್ಧಾರ ಹೊರಬೀಳಲಿದೆ. ಈ ಹಂತದಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ಕರ್ನಾಟಕದ ಕಾಂಗ್ರೆಸ್ ಹಿರಿಯ ನಾಯಕರಲ್ಲೇ ಸಹಮತ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಬೀಡುಬಿಟ್ಟ ಟಿಕೆಟ್ ಆಕಾಂಕ್ಷಿಗಳು
ಈ ನಡುವೆ ದೆಹಲಿ ಕರ್ನಾಟಕ ಭವನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಅಡ್ಡೆಯಾಗಿ ಪರಿವರ್ತನೆಗೊಂಡಿದೆ. ಈಗಾಗಲೇ ಡಾ. ಜಿ.ಪರಮೇಶ್ವರ ಹಾಗೂ ಸಿದ್ದರಾಮಯ್ಯ ಹೈಕಮಾಂಡ್ ಭೇಟಿಗಾಗಿ ಬಂದು ಇಲ್ಲಿ ಉಳಿದಿದ್ದಾರೆ. ಅವರಲ್ಲದೆ ಮಲ್ಲಾಜಮ್ಮ, ರಾಣಿ ಸತೀಶ್, ಎ.ಕೃಷ್ಣಪ್ಪ, ಬಿ.ಸಿ.ಪಾಟೀಲ್, ಅರಕಲಗೂಡು ಮಂಜು, ಕಾಂಗ್ರೆಸ್ ಕದ ತಟ್ಟುತ್ತಿರುವ ಸಿ.ಎಸ್. ಪುಟ್ಟೇಗೌಡ ಅವರು ಕರ್ನಾಟಕ ಸಂಘದಲ್ಲಿ ಬೀಡು ಬಿಟ್ಟಿದ್ದಾರೆ. ಹೈಕಮಾಂಡ್‌ನ ಹಸಿರು ನಿಶಾನೆಗಾಗಿ ಕಾದಿರುವ ಪಕ್ಷೇತರ ಶಾಸಕರಾದ ನರೇಂದ್ರಸ್ವಾಮಿ, ಸುಧಾಕರ್, ಶಿವರಾಜ್ ತಂಗಡಗಿ, ವೆಂಕಟರಮಣಪ್ಪ ಅವರಲ್ಲದೆ ಸಚಿವ ರಾಜೂಗೌಡ ಅವರೂ ಬಂದಿಳಿದಿದ್ದಾರೆ.
ಕರ್ನಾಟಕ ಭವನಕ್ಕೂ ನೀತಿ ಸಂಹಿತೆ
ದೆಹಲಿಯಲ್ಲಿರುವ ಕರ್ನಾಟಕ ಭವನಕ್ಕೂ ಚುನಾವಣಾ ನೀತಿ ಸಂಹಿತೆ ಬಿಸಿ ತಟ್ಟಿದೆ. ಸದ್ಯಕ್ಕೆ ಕಾಂಗ್ರೆಸ್‌ನ ರಾಜಕೀಯ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿರುವ ಕರ್ನಾಟಕ ಭವನದಲ್ಲಿ ರಾಜಕೀಯ ಸಭೆ, ಸುದ್ದಿಗೋಷ್ಠಿ ನಡೆಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ವಿದ್ಯುನ್ಮಾನ ಮಾಧ್ಯಮಗಳೊಂದಿಗೆ ಕೂಡ ಮಾತುಕತೆ ಆಡುವಂತಿಲ್ಲ, ಕರ್ನಾಟಕ ಭವನದ ಹೊರಗೆ ನಾಯಕರು ಮಾಧ್ಯಮಗಳೊಂದಿಗೆ ಮಾತುಕತೆ ನಡೆಸಬಹುದು.
ಸರ್ಕಾರಿ ವಾಹನ ವಾಪಸ್
ಈ ನಡುವೆ ಚುನಾವಣಾ ನೀತಿ ಸಂಹಿತೆ ಘೋಷಣೆ ಆಗಿದ್ದರೂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಅವರು ಕರ್ನಾಟಕ ಭವನದ ವಾಹನಗಳನ್ನು ಖಾಸಗಿ ಭೇಟಿಗೆ ಬಳಸಿದ್ದರು. ಆದರೆ, ಶುಕ್ರವಾರ 'ಸುವರ್ಣ ಸುದ್ದಿವಾಹಿನಿ' ಈ ಕುರಿತಂತೆ ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ಕರ್ನಾಟಕ ಭವನದ ಸಿಬ್ಬಂದಿ ಸಿದ್ದರಾಮಯ್ಯ ಹಾಗೂ ಡಾ.ಪರಮೇಶ್ವರ ಅವರಿಗೆ ನೀಡಿದ್ದ ಕಾರನ್ನು ಹಿಂದಕ್ಕೆ ಪಡೆದಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.