ಮನೆಕೊಳ್ಳುವ ಮಹಿಳೆಯರಿಗೆ
ಮೂಲಧನ ಸಂಗ್ರಹಿಸಿ
ಈ ಕುರಿತು ಬಹುತೇಕರು ತಲೆಕೆಡಿಸಿಕೊಳ್ಳುವುದೇ ಇಲ್ಲ. ದಾಖಲೆಪತ್ರಗಳು ಸರಿಯಾಗಿವೆ ಅಂದರೆ ಯಾವುದೇ ಬ್ಯಾಂಕ್ ಸಾಲ ಕೊಡಬಹುದು. ಆದರೆ, ಅದನ್ನು ತೀರಿಸಬೇಕಲ್ಲ. ಹಾಗಾಗಿ ಮನೆ ಕೊಳ್ಳುವ ಚಿಂತನೆಯಿದ್ದರೆ ಈ ಕುರಿತು ಮೊದಲೇ ಯೋಜನೆ ಹಾಕಿಕೊಳ್ಳಿ. ಮನೆಕೊಳ್ಳಲಿಕ್ಕೆಂದೆ ಒಂದಷ್ಟು ಮೂಲಧನ ಸಂಗ್ರಹಿಸಿಟ್ಟುಕೊಳ್ಳಿ. ಉಳಿದ ಹಣಕ್ಕಾಗಿ ಬ್ಯಾಂಕ್ಗಳಲ್ಲಿ ಸಾಲ ಪಡೆಯಿರಿ. ಇದರಿಂದ ಸಾಲದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.
ಯಾವ ಉದ್ದೇಶಕ್ಕಾಗಿ?
ಯಾವ ರೀತಿಯ ಮನೆ ಹಾಗೂ ಯಾವ ಸ್ಥಳದಲ್ಲಿ ಮನೆ ಕೊಂಡುಕೊಳ್ಳಬೇಕೆಂದಿದ್ದೀರಿ ಎನ್ನುವುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಹೂಡಿಕೆ ಉದ್ದೇಶ ಇಟ್ಟುಕೊಂಡಿದ್ದರೆ ನೀವು ಕೆಲಸ ಮಾಡುವ ಕಚೇರಿಗೂ ಮನೆಗೂ ಇರುವ ದೂರ ಎಷ್ಟಿದೆ ಎಂಬುದನ್ನು ಪರಿಶೀಲಿಸಿಕೊಳ್ಳಿ.
ಹೊಣೆಗಾರಿಕೆಗೆ ಸಿದ್ಧರಾಗಿ
ಸಾಲ ತೆಗೆದುಕೊಳ್ಳುವುದೇ ಆಗಿದ್ದರೆ ಒಂದಷ್ಟು ಹೊಣೆಗಾರಿಕೆಗೆ ನೀವು ಸಿದ್ಧರಾಗಲೇಬೇಕು. ಮನೆ ಸಾಲ ತೀರಿಸುವುದು ಕೆಲ ವರ್ಷಗಳ ಕಾಲ ಕಷ್ಟವಾಗಬಹುದು. ನಿಮ್ಮ ಆದಾಯದ ಅರ್ಧದಷ್ಟು ಭಾಗ ಇಎಂಐಗೆ ಹೋಗಬಹುದು. ಹಾಗಾಗಿ ಈ ಹೊಸ ಬೆಳವಣಿಗೆಗೆ ಹೊಂದಿಕೊಳ್ಳಲು ಕಿರಿಕಿರಿ ಆಗಬಹುದು. ಇದಕ್ಕಾಗಿ ನೀವು ಇತರೆ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳುವ ಯೋಜನೆಯನ್ನೂ ಹಾಕಿಕೊಳ್ಳಬೇಕು. ವಿದೇಶಿ ಪ್ರವಾಸ, ಹೊರಗಿನ ಊಟ ಇದೆಲ್ಲದಕ್ಕೂ ಕಡಿವಾಣ ಹಾಕಬೇಕು.
ದಾಖಲೆಗಳ ಪರಿಶೀಲನೆ
ಇದು ನೀವು ಮಾಡಲೇಬೇಕಾದ ಅತಿ ಮುಖ್ಯ ಕೆಲಸ. ಖರೀದಿಸಬೇಕೆಂದಿರುವ ಮನೆಗೆ ಸಂಬಂಧಿಸಿದಂತೆ ಯಾವುದಾದರೂ ಕಾನೂನು ತೊಡಕುಗಳಿವೆಯೇ ಎಂಬುದರ ಪರಿಶೀಲನೆ ಅಗತ್ಯ. ಬ್ಯಾಂಕ್ಗಳಿಂದ ಸಾಲ ಪಡೆಯುವಿರಾದರೆ ಅವುಗಳೇ ದಾಖಲೆಗಳ ಪರಿಶೀಲನೆ ನಡೆಸುತ್ತವೆ.
ಸಾಲ ಪಡೆಯಲು ಅರ್ಹರೇ?
ನೀವು ಮನೆಯೊಂದನ್ನು ಕೊಳ್ಳುವ ಮೊದಲು ನಿಮ್ಮ ಸಿಐಬಿಐಎಲ್ ಸ್ಕೋರ್ ಎಷ್ಟಿದೆ ಎಂಬುದನ್ನು ನೋಡಿಕೊಳ್ಳಿ. ಸಿಐಬಿಐಎಲ್.ಕಾಂಗೆ ಲಾಗಿನ್ ಆಗುವ ಮೂಲಕ ಇದನ್ನು ಪರಿಶೀಲಿಸಿಕೊಳ್ಳಬಹುದು. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದಾದರೆ ಈ ಕುರಿತು ಪರಿಶೀಲನೆ ನಡೆಸುವುದು ಅತ್ಯಗತ್ಯ. ಶೇ. 80ರಷ್ಟು ಸಾಲವನ್ನು ಕ್ರೆಡಿಟ್ ಸ್ಕೋರ್ 750ಕ್ಕಿಂತ ಹೆಚ್ಚಿದ್ದಾಗ ನೀಡಲಾಗುತ್ತದೆ.
ಸಮಸ್ಯೆ ಇರುವ ಸಮಯಕ್ಕಾಗಿ
ಪುರುಷರಿಗೆ ಹೋಲಿಸಿದರೆ ಕೆಲಸ ಮಾಡುವ ಅದರಲ್ಲೂ ಖಾಸಗಿ ಕಚೇರಿಯಲ್ಲಿ ಕೆಲಸಕ್ಕಿರುವ ಮಹಿಳೆಯರಿಗೆ ಸಮಸ್ಯೆಗಳು ಹೆಚ್ಚು. ಮುಖ್ಯವಾಗಿ ಮಹಿಳೆಯರು ಸಮಸ್ಯೆ ಎದುರಿಸುವುದು ಹೆರಿಗೆ ಸಂದರ್ಭದಲ್ಲಿ. ಈ ವೇಳೆ ಕೆಲಸಕ್ಕೆ ದೀರ್ಘ ರಜೆ ತೆಗೆದುಕೊಳ್ಳಬೇಕಾಗುತ್ತದೆ. ಹೊಸ ಮಗುವಿನ ಸ್ವಾಗತ, ಆರೋಗ್ಯ ಸಮಸ್ಯೆಗಳಿಗೆ ಸಾಕಷ್ಟು ವೆಚ್ಚವಾಗುತ್ತದೆ. ಈ ವೆಚ್ಚಗಳಿಗಾಗಿಯೂ ಅವರು ಒಂದಷ್ಟು ಹಣ ತೆಗೆದಿಡುವುದು ಒಳಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.