ಲಂಡನ್/ಮುಂಬೈ: ವಿಶ್ವಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವ ಇಸಿಸ್ ಉಗ್ರಗಾಮಿ ಸಂಘಟನೆ ಅಣು ಬಾಂಬ್ ಸಿದ್ಧಪಡಿಸಲಿದೆಯೇ?
ಇರಾಕ್‌ನ ವಿಶ್ವವಿದ್ಯಾಲದಿಂದ 40 ಕೆಜಿ ಯುರೇನಿಯಂ ಅನ್ನು ಇಸಿಸ್ ಉಗ್ರರು ಕದ್ದಿರುವುದು ಇಂತಹುದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಮೆಸೂಲ್ ವಿವಿಯಲ್ಲಿದ್ದ ಯುರೇನಿಯಂ ಕಳವಾದ 4 ತಿಂಗಳ ಬಳಿಕ ಇಸಿಸ್ ಉಗ್ರರು ಅದನ್ನು ಪ್ರದರ್ಶನ ಮಾಡುತ್ತಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲ, ನಾವು ಈ ಯುರೇನಿಯಂನಿಂದ ತಯಾರಿಸುವ 'ಡರ್ಟಿ ಬಾಂಬ್' ಅನ್ನು ಸಾರ್ವಜನಿಕ ಸ್ಥಳದಲ್ಲಿ ಸ್ಫೋಟಿಸಿದರೆ ಪರಿಣಾಮ ಎಷ್ಟು ಭೀಕರವಾಗಿರಬಹುದು ಎಂದು ಸ್ವತಃ ಉಗ್ರನೊಬ್ಬ ಟ್ವೀಟ್ ಮಾಡಿದ್ದಾನೆ.
ಇದು ಇಡೀ ವಿಶ್ವದಲ್ಲೇ ಆತಂಕ್ಕಕ್ಕೆ ಕಾರಣವಾಗಿದೆ. ಸಮೂಹ ನಾಶ ಅಸ್ತ್ರಗಳು ಇಸಿಸ್ ಉಗ್ರರ ಕೈಗೆ ಸಿಕ್ಕಿದರೆ ಪರಿಸ್ಥಿತಿ ಏನಾಗಬಹುದು ಎಂಬ ಭೀತಿ ಕಾಡತೊಡಗಿದೆ. ಉಗ್ರರಹೇಳಿಕೆ ನಿಜವೆಂದಾದರೇ, ಇದು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೂ ದೊಡ್ಡ ಸವಾಲಾಗಿ ಪರಿಣಮಿಸಲಿದೆ.
ವೈದ್ಯನಿಂದ ನೇಮಕ: ಅರೀಬ್ ಬಹಿರಂಗ: ಇಸಿಸ್‌ಗೆ ಸೇರಬಯಸುವ ಭಾರತೀಯ ಯುವಕರನ್ನು ಗಲ್ಫ್‌ನ ವೈದ್ಯರೊಬ್ಬರು ನೇಮಕ ಮಾಡುತ್ತಿದ್ದರು. ಈ ಕೆಲಸದಲ್ಲಿ ಅನೇಕ ಟ್ರಾವೆಲ್ ಏಜೆಂಟ್‌ಗಳೂ ಕೈಜೋಡಿಸಿದ್ದರು. ಹೀಗೆಂದು ಇಸಿಸ್‌ನಿಂದ ಭಾರತಕ್ಕೆ ವಾಪಾಸಾಗಿ ಎನ್‌ಐಎ ವಶದಲ್ಲಿರುವ ಅರೀಬ್ ಮಜೀದ್ ಬಾಯಿಬಿಟ್ಟಿದ್ದಾನೆ. ಅಷ್ಟೇ ಅಲ್ಲ. ಫೇಸ್‌ಬುಕ್‌ನಲ್ಲಿ ತಾಹಿರಾ ಭಟ್ ಎಂಬ ಮಹಿಳೆಯೊಬ್ಬರು ಇಸಿಸ್ ನೇಮಕದ ಹೊಣೆ ಹೊತ್ತಿದ್ದರು. ಅದರಂತೆ ಅವರು ನಮ್ಮನ್ನು ಇರಾಕ್‌ಗೆ ತೆರಳುವಂತೆ ಸೂಚಿಸಿದರು. ಅಲ್ಲಿ ಯಾರನ್ನು ಭೇಟಿಯಾಗಬೇಕು ಎಂಬ ಮಾಹಿತಿಯನ್ನು ಒದಗಿಸಿದ್ದರು ಎಂದಿದ್ದಾರೆ ಅರೀಬ್.
ಅಮೆರಿಕದಿಂದ ಅರೀಬ್ ವಿಚಾರಣೆ?
3 ತಿಂಗಳ ಕಾಲ ಇಸಿಸ್ ಪರ ಹೋರಾಡಿದ ಅರೀಬ್ ಮಜೀದ್‌ನನ್ನು ಅಮೆರಿಕದ ಗುಪ್ತಚರ ಸಂಸ್ಥೆಗಲೂ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ. ಇಸಿಸ್ ಕಾರ್ಯಚಟುವಟಿಕೆಗಳ ಬಗ್ಗೆ ಅರೀಬ್‌ಗೆ ಹೆಚ್ಚಿನ ವಿಚಾರಗಳು ಗೊತ್ತಿರುವ ಕಾರಣ, ಆತನನ್ನು ಪ್ರಶ್ನಿಸಲು ಗುಪ್ತಚರ ಸಂಸ್ಥೆಗಳು ಮುಂದಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.