ದೇಶ

ಖಾಸಗಿ ಬಸ್ ಅಗ್ನಿಗಾಹುತಿ: ಯುವತಿ ಗಂಭೀರ, ಪ್ರಯಾಣಿಕರು ಪಾರು

ಉಪ್ಪಿನಂಗಡಿ: ಬೆಂಗಳೂರಿನಿಂದ ಮಣಿಪಾಲದತ್ತ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಆಕಸ್ಮಿಕವಾಗಿ ಅಗ್ನಿ ಸ್ಫರ್ಶವಾಗಿ ಸಂಪೂರ್ಣ ಸುಟ್ಟು ಹೋಗಿದೆ.

ಬಸ್ಸಿನಲ್ಲಿದ್ದ 27 ಪ್ರಯಾಣಿಕರಲ್ಲಿ ಒಬ್ಬ ಯುವತಿ ಗಂಭೀರ ಗಾಯಗೊಂಡು ಇತರರು ಪಾರಾಗಿರುವ ಘಟನೆ ಸಣ್ಣಂಪಾಡಿ ಎಂಬಲ್ಲಿ ಸೋಮವಾರ ಮುಂಜಾನೆ ನಡೆದಿದೆ. ಬಿಹಾರದ ಪಟನಾ ನಿವಾಸಿ ಭರತ್‌ರಾಣಿ (23) ಗಾಯಗೊಂಡಿದ್ದು, ಈಕೆ ಮಣಿಪಾಲದಲ್ಲಿ ವಿದ್ಯಾರ್ಥಿನಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ಖಾಸಗಿ ಸ್ಲೀಪರ್ ಬಸ್ ಭಾನುವಾರ ರಾತ್ರಿ ಬೆಂಗಳೂರಿನಿಂದ 11 ಗಂಟೆಗೆ ಹೊರಟಿದ್ದು, ಸೋಮವಾರ ನಸುಕಿನ ವೇಳೆ 4 ರಿಂದ 4.30ರ ನಡುವೆ ರಾ.ಹೆ. 75ರ ನೆಲ್ಯಾಡಿ ಕ್ರಮಿಸುತ್ತಿದ್ದಂತೆ ಬಸ್ಸಿನಲ್ಲಿ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡಿತು.

ಬಸ್ಸಿನ ತಳಭಾಗದಲ್ಲಿ ಬೆಂಕಿ ಆರಂಭಗೊಂಡು ಹೊಗೆ ಬಸ್ ಒಳಗಡೆ ವ್ಯಾಪಿಸಿ ಉಸಿರುಗಟ್ಟಿಂದತಾಗಿ ಎಚ್ಚರಗೊಂಡ ಪ್ರಯಾಣಿಕರು, ಬಸ್ಸಿನಲ್ಲಿ ಅಗ್ನಿ ಜ್ವಾಲೆ ಕಂಡು ಬೊಬ್ಬಡಲು ಪ್ರಾರಂಭಿಸಿದರು. ತಕ್ಷಣ ಚಾಲಕ ಸಣ್ಣಂಪಾಡಿ ಬಳಿ ಬಸ್ ನಿಲ್ಲಿಸಿದ. ಈ ವೇಳೆಗಾಗಲೇ  ಬಸ್‌ನ ಭಾಗಶಃ ವ್ಯಾಪಿಸಿದ್ದ ಜ್ವಾಲೆಯ ನಡುವೆಯೇ ಪ್ರಯಾಣಿಕರು ಬಸ್ಸಿನಿಂದ ಇಳಿಯತೊಡಗಿದರು. ನಸುಕಿನ ಸಿಹಿ ನಿದ್ರೆಯಲ್ಲಿದ್ದ ಕೆಲ ಮಂದಿಯನ್ನು ಕಿಟಕಿ ಗಾಜು ಒಡೆದು ಹೊರಗೆಳೆಯುವ ಯತ್ನ ನಡೆಸಲಾಯಿತು. ಈ ಮಧ್ಯೆ ಹೊಗೆಯಿಂದಾಗಿ ನಿದ್ರೆಯಲ್ಲಿಯೇ ಪ್ರಜ್ಞಾಹೀನಳಾಗಿದ್ದ ಭರತ್ ರಾಣಿ ಬಸ್ಸಿನಲ್ಲೇ ಉಳಿದಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ.

ಬೆಂಕಿ ಆಕೆಯ ದೇಹವನ್ನಾವರಿಸಿ, ಕಿರುಚಾಡಿದಾಗಲೇ ಬಸ್ಸಿನೊಳಗೆ ಪ್ರಯಾಣಿಕರೊಬ್ಬರು ಉಳಿದಿರುವ ವಿಚಾರ ಸಹ ಪ್ರಯಾಣಿಕರ ಗಮನಕ್ಕೆ ಬಂತು. ಕೂಡಲೆ ಆಕೆಯ ಸೀಟ್ ಬಳಿಯ ಕಿಟಕಿ ಗಾಜು ಒಡೆದು ಆಕೆಯನ್ನು ಸಹ ಪ್ರಯಾಣಿಕರು ಹೊರಗೆಳೆದರು.

ಘಟನಾ ಸ್ಥಳದಲ್ಲಿ ಮೊಬೈಲ್ ಸಂಪರ್ಕ ಲಭಿಸದ ಕಾರಣ ಪ್ರಕರಣವನ್ನು ಅಗ್ನಿಶಾಮಕ ದಳಕ್ಕೆ ತಿಳಿಸಲು ಅಸಾಧ್ಯವಾಗಿ, ತುರ್ತು ಕಾರ್ಯಾಚರಣೆ ನಡೆಸುವುದು ವಿಳಂಬವಾಯಿತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ ನೀಡುವಷ್ಟರಲ್ಲಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿತ್ತು.

SCROLL FOR NEXT