ಕತುವಾ(ಜಮ್ಮು ಮತ್ತು ಕಾಶ್ಮೀರ): ಪ್ರಪಂಚಾದಾದ್ಯಂತ ಉತ್ತಮ ಗೌರವ ದೊರೆಯಲು ಭಾರತದ ಜನತೆಯೇ ಕಾರಣ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಧಾನಸಭಾ ಚುನಾವಣಾ ಪ್ರಯುಕ್ತ ಜಮ್ಮು ಗಡಿ ಪ್ರದೇಶ ಕತುವಾದ ರ್ಯಾಲಿಯಲ್ಲಿ ಭಾಗಿಯಾಗಿದ್ದ ಮೋದಿ, ಪ್ರಪಂಚದಲ್ಲಿ ನಾನು ಎಲ್ಲಿಯೇ ಹೋದರೂ ಉತ್ತಮ ಗೌರವ ದೊರೆಯುತ್ತಿದೆ. ವಿದೇಶೀಯರು ಭಾರತೀಯ ಜನರ ಶ್ರೇಷ್ಟತೆಯನ್ನು ಅರಿತಿದ್ದು, ನಮ್ಮನ್ನು ಗುರ್ತಿಸುತ್ತಿದ್ದಾರೆ. ಇಂದು ಪ್ರಪಂಚದ ಯಾವುದೇ ಪ್ರದೇಶಕ್ಕೇ ಹೋದರೂ ಅಲ್ಲಿನ ಜನರು ನನಗೆ ಉತ್ತಮ ಗೌರವ ನೀಡುತ್ತಿದ್ದು, ನನ್ನೊಂದಿಗೆ ವಿದೇಶಿಯರು ಕೈ ಕುಲುಕುವಾಗ ನನ್ನನ್ನಲ್ಲದೇ ನನ್ನ ಹಿಂದಿರುವ 1.25ಬಿಲಿಯನ್ ಭಾರತೀಯ ಜನರನ್ನು ನೋಡುತ್ತಿದ್ದಾರೆ. ಇದಕ್ಕೆಲ್ಲಾ ಭಾರತೀಯ ಜನರೇ ಕಾರಣ ಎಂದು ಮೋದಿ ಭಾಷಣದಲ್ಲಿ ತಿಳಿಸಿದ್ದಾರೆ.
ಜನಾದೇಶವನ್ನು ಮುನ್ನಡೆಸುವ ಶಕ್ತಿಯಿಲ್ಲದಿದ್ದಾಗ ಇತರೆ ದೇಶಗಳೂ ನಮ್ಮನ್ನು ಗುರ್ತಿಸುವುದಿಲ್ಲ, ನನಗೆ ಜನಾದೇಶ ಮುನ್ನಡೆಸುವ ಶಕ್ತಿಯಿದೆ ಎಂದು ಹೇಳಿದ ಮೋದಿ ಜಮ್ಮು ಕಾಶ್ಮೀರದ ಜನತೆ, ಬಿಜೆಪಿಗೆ ಜನಾದೇಶ ಮುನ್ನಡೆಸುವ ಶಕ್ತಿ ನೀಡಿದರೆ ಇತರೆ ದೇಶಗಳೊಂದಿಗೆ ಉತ್ತಮ ಗೌರವ ತೆಗೆದುಕೊಳ್ಳಲು ಮತ್ತು ಭಾರತದಲ್ಲಿ ಶಕ್ತಿಯುತ ಸರ್ಕಾರವಾಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ 18 ವಿಧಾನ ಸಭಾ ಕ್ಷೇತ್ರಗಳಲ್ಲಿ ಡಿ.20ರಂದು ಕೊನೆಯ ಹಂತದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಡಿ.23 ರಂದು ಮತಎಣಿಕೆ ನಡೆಯಲಿದೆ.