ನವದೆಹಲಿ: ಅನಾರೋಗ್ಯದಿಂದ ಬಳಲಿಕೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ತಮ್ಮ ಆರೋಗ್ಯ ಚೇತರಿಕೆಗೆ ಪ್ರಾರ್ಥನೆ ಮಾಡಿದ ಎಲ್ಲಾ ಜನತೆಗೂ ಧನ್ಯವಾದಗಳನ್ನು ಸೂಚಿಸಿದ್ದಾರೆ.
ಶಸ್ತ್ರ ಚಿಕಿತ್ಸೆ ನಂತರ ಇದೇ ಮೊದಲ ಬಾರಿಗೆ ಟ್ವಿಟರ್ ಮೂಲಕ ತಾವು ಆರೋಗ್ಯವಾಗಿರುವುದಾಗಿ ಸಂದೇಶ ರವಾನಿಸಿರುವ ಪ್ರಣಬ್ ಮುಖರ್ಜಿಯವರು ದೇಶದ ಜನತೆಗೆ ಧನ್ಯವಾದ ಸೂಚಿಸಿದ್ದು, ಜನರ ಪ್ರಾರ್ಥನೆಯಿಂದಾಗಿ ಈಗಾಗಲೇ ನನ್ನ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡು ಬಂದಿದೆ. ಆದಷ್ಟೂ ಬೇಗ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ನಿನ್ನೆ ಬೆಳಿಗ್ಗೆ ರಾಷ್ಟ್ರಪತಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಸೇನೆಯ ರಿಸರ್ಚ್ ಆ್ಯಂಡ್ ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಪ್ರಣಬ್ ಮುಖರ್ಜಿ ಅವರನ್ನು ತಪಾಸಣೆಗೊಳಪಡಿಸಿದ ವೈದ್ಯರು ಹೃದಯಕ್ಕೆ ರಕ್ತ ಪೂರೈಸುವ ನಾಳಗಳಲ್ಲಿ ತೊಂದರೆ ಇರುವುದಾಗಿ ಪತ್ತೆ ಹಚ್ಚಿದ್ದರು.
ನಂತರ ಸಮಸ್ಯೆ ಕಂಡುಕೊಂಡ ವೈದ್ಯರು ಕೂಡಲೇ ರಾಷ್ಟ್ರಪತಿ ಅವರಿಗೆ ಆ್ಯಂಡಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಿ ಪರಿಧಮನಿ ಸ್ಟೆಂಟ್ ಅಳವಡಿಸಿದ್ದರು.