ಬಂಧಿತ ಮೆಹ್ದಿ ವಿಚಾರಣೆಯಿಂದ ಬಹಿರಂಗ, ಇಸಿಸ್ ವಿಚಾರಧಾರೆಗಳನ್ನು ಪಸರಿಸುತ್ತಿದ್ದ ಆರೋಪಿ
ಬೆಂಗಳೂರು: ಭಾರತ ಹಾಗೂ ಈ ದೇಶದೊಂದಿಗೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿರುವ ರಾಷ್ಟ್ರಗಳ ವಿರುದ್ಧ ಇಸಿಸ್ ಜತೆಗೂಡಿ ಹೋರಾಡುವಂತೆ ಪ್ರಚೋದಿಸುವ ಯತ್ನವನ್ನು ವಿಚಾರಣೆ ವೇಳೆ ತಿಳಿದುಬಂದಿದೆ.
ಇಸಿಸ್ ಉಗ್ರರನ್ನು ಬೆಂಬಲಿಸಿ ಪ್ರಚೋದನಾತ್ಮಕ ಟ್ವಿಟರ್ ಖಾತೆ ನಿರ್ವಹಿಸಿದ ಆರೋಪದ ಮೇಲೆ ಬಂಧಿತನಾಗಿರುವ ಮೆಹ್ದಿ ಮಸ್ರೂರ್ ಬಿಸ್ವಾಸ್‌ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿರುವ ಪೊಲೀಸರು, ಆತನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಇಸಿಸ್ ಸಂಘಟನೆಯ ವಿಚಾರಧಾರೆಗಳನ್ನು ಪಸರಿಸುವ ಕೆಲಸ ಮಾಡುತ್ತಿದ್ದ ಆತ, ಭಾರತದ ಮಿತ್ರರಾಷ್ಟ್ರಗಳ ವಿರುದ್ಧ ಕತ್ತಿ ಮಸೆಯುವಂತೆ ಸಾವಿರಾರು ಜನರ ಮನಸ್ಸುಗಳ ಮೇಲೆ ಪ್ರಭಾವ ಬೀರುತ್ತಿದ್ದ. ಇಸಿಸ್ ಜತೆಗೆ ಮೆಹ್ದಿ ಹೊಂದಿರಬಹುದಾದ ಆಂತರಿಕ ಹಾಗೂ ಬಾಹ್ಯ ಸಂಪರ್ಕಗಳ ಬಗ್ಗೆ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಆತನಿಗೆ ಉಗ್ರಗಾಮಿ ಸಂಘಟನೆಗಳ ಜತೆ ಸಂಪರ್ಕ ಇರಬಹುದು. ದೇಶದಲ್ಲಿ ಇಸಿಸ್ ಅನ್ನು ಬೆಂಬಲಿಸುವ ಸಕ್ರಿಯ ಗುಂಪುಗಳು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸುಳಿವಿದೆ. ಹೀಗಾಗಿ ದೇಶದ ಬೇರೆ ಬೇರೆ ಭಾಗಗಳೊಂದಿಗೆ ಮೆಹ್ದಿ ಸಂಪರ್ಕ ಹೊಂದಿದ್ದನಾ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಹಾಗೂ ಹೊಂದಿದ್ದನಾ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನದಿಂದ ಎಷ್ಟು ಜನ ಇಸಿಸ್ ಜತೆ ಕೆಲಸ ಮಾಡುತ್ತಿದ್ದಾರೆ. ಅವರ ಪಾತ್ರವೇನು ಎನ್ನುವ ಬಗ್ಗೆ ಮೆಹ್ದಿಯ ಟ್ವಿಟರ್ ಪೇಜ್‌ನಲ್ಲಿ ಸೌದಿ ಅರೇಬಿಯಾದಿಂದ ಕೆಲವರು ಮಾಹಿತಿ ಕೋರಿದ್ದರು. ಆದರೆ, ಬುದ್ದಿವಂತಿಕೆ ಪ್ರದರ್ಶಿಸಿದ್ದ ಮೆಹ್ದಿ, ಯಾವುದೇ ಉತ್ತರ ನೀಡಿರಲಿಲ್ಲ. ಅಲ್ಲದೇ ಇಸಿಸ್ ಬಗೆಗಿನ ಇತ್ತೀಚಿನ ಬೆಳವಣಿಗಳ ಬಗ್ಗೆ ಅಪ್‌ಡೇಟ್ ಮಾಡಿ ಸುಮ್ಮನಾಗಿದ್ದ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಮೊಬೈಲ್ ಬಳಸುತ್ತಿರಲಿಲ್ಲ!
ಮೊಬೈಲ್ ಫೋನ್ ಅನ್ನು ಕೇವಲ ಪಶ್ಚಿಮ ಬಂಗಾಳದಲ್ಲಿರುವ ತನ್ನ ಪಾಲಕರೊಂದಿಗೆ ಮಾತನಾಡಲು ಮಾತ್ರ ಬಳಸುತ್ತಿದ್ದ. ಉಳಿದಂತೆ ಮೊಬೈಲ್ ಫೋನ್ ವ್ಯಾಮೋಹಿಯಾಗಿರಲಿಲ್ಲ. ಎಸ್‌ಎಂಎಸ್ ಕಳುಹಿಸುವುದು ಅಪರೂಪ. ಬಂದ ಎಸ್‌ಎಂಎಸ್‌ಗಳಿಗೆ ಉತ್ತರಿಸುವುದು ಕಡಿಮೆ ಪರಿಶೀಲನೆ ವೇಳೆ ಅಂತಹ ಮಹತ್ವದ ದಾಖಲೆಗಳೇನೂ ಸಿಕ್ಕಿಲ್ಲ. ಜಿಹಾದಿ ಸಾಹಿತ್ಯ ಅಥವಾ ಇಸಿಸ್ ಬೆಂಬಲಿಸುವ ಸಾಹಿತ್ಯ, ಪುಸ್ತಕಗಳು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ವಿದೇಶಗಳಿಂದ ಕೆಲವೇ ಕೆಲವು ಕರೆಗಳು ಮೆಹ್ದಿ ಫೋನ್‌ಗೆ ಬಂದಿದ್ದು ಅವು ಕೂಡ ಇಂಗ್ಲೆಂಡ್‌ನ ಚಾನೆಲ್ 4 ಸುದ್ದಿವಾಹಿನಿಯಿಂದ ಸಂದರ್ಶನಕ್ಕಾಗಿ ಬಂದಿವೆ ಎಂದು ಮೂಲಗಳು ತಿಳಿಸಿವೆ.
ಲ್ಯಾಪ್‌ಟಾಪ್ ನಿಂದ ಮಾಹಿತಿಗಳನ್ನು ಸಂಗ್ರಹಿಸಿ, ಪರಿಶೀಲನೆ ಮಾಡಬೇಕಿದೆ. ನಂತರವೇ ಮೆಹ್ದಿಗೆ ಯಾವುದಾದರೂ ಉಗ್ರ ಸಂಘಟನೆ ಜತೆ ಸಂಪರ್ಕ ಇತ್ತೇ ಎನ್ನುವುದುನ್ನು ತಿಳಿದುಕೊಳ್ಳಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ. ಲೆವೆಂಟೈನ್ ಪ್ರದೇಶದ ದೇಶಗಳಾದ ಸಿರಿಯಾ, ಲೆಬನಾನ್, ಇಸ್ರೇಲ್, ಇರಾಕ್, ಗಾಜಾಪಟ್ಟಿ ಮುಂತಾದ ರಾಷ್ಟ್ರಗಳಲ್ಲಿ ಯುದ್ಧ ಪರಿಸ್ಥಿತಿ ಬಗ್ಗೆ ತೀವ್ರ ಕಾಳಜಿ ಹೊಂದಿದ್ದ ಕಾರಣ ಇಸಿಸ್ ಕಡೆ ಆಕರ್ಷಿತವಾಗಿ ಈ ಬಗ್ಗೆ ಟ್ವೀಟ್ ಮಾಡುತ್ತಿದ್ದೆ.
ಉಗ್ರರ ನೇರ ಸಂಪರ್ಕವಿಲ್ಲ. ವೈಯುಕ್ತಿ ಆಸಕ್ತಿಯಿಂದ ಟ್ವಿಟರ್‌ನಲ್ಲಿ ಅಲ್ಲಿನ ಜನರ ರಕ್ಷಣೆ ಹಾಗೂ ಕಾಫೀರರ (ವಿರೋಧಿಗಳ) ವಿರುದ್ಧ ನಡೆಯುತ್ತಿದ್ದ ಯುದ್ಧಕ್ಕೆ ಬೆಂಬಲಿಸುತ್ತಿದ್ದೆ. ಅದನ್ನು ಒಪ್ಪಿಕೊಂಡು ಹಲವರು ನನ್ನನ್ನು ಫಾಲೋ ಮಾಡುತ್ತಿದ್ದರು ಎಂದು ಮೆಹ್ದಿ ಪುನರುಚ್ಚರಿಸಿದ್ದಾನೆ ಎಂದು ತಿಳಿದುಬಂದಿದೆ.
ಕಾಲಾವಕಾಶ ಬೇಕು: ಗೋಯಲ್
ಮೆಹ್ದಿ ಬಂಧನ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಿಸಿಬಿ ಡಿಸಿಪಿ ಅಭಿಷೇಕ್ ಗೋಯಲ್ ಅವರಿಗೆ ಇಸಿಸ್‌ಗೆ ಬೆಂಬಲ ಸೂಚಿಸುವ ಟ್ವಿಟರ್ ಖಾತೆಗಳಿಂದ ಬೆದರಿಕೆ ಸಂದೇಶಗಳು ಬರುತ್ತಿವೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯ ನೀಡಿದ ಗೋಯಲ್, ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದಿದ್ದಾರೆ. ಬೆದರಿಕೆ ಹಾಕಿರುವ ಟ್ವೀಟ್ ಮೂಲದ ಬಗ್ಗೆ ತಿಳಿದುಕೊಳ್ಳಲು ಕಾಲಾವಕಾಶ ಬೇಕು ಎಂದು ತಿಳಿಸಿದ್ದಾರೆ.
ಬೆದರಿಕೆ ಟ್ವೀಟ್‌ನಲ್ಲಿ ಇಂಗ್ಲಿಷ್ ಜತೆಗೆ ಅರೇಬಿಕ್ ಭಾಷೆಯೂ ಇದೆ. ತಲೆ ಕತ್ತರಿಸುವ ರಕ್ತಸಿಕ್ತಫೋಟೋಗಳು ಅಕೌಂಟ್‌ನಲ್ಲಿವೆ. 500ಕ್ಕೂ ಅಧಿಕ ಫಾಲೋವರ್‌ಗಳು, ನೂರಾರು ಟ್ವೀಟ್‌ಗಳು ಅಕೌಂಟ್‌ನಲ್ಲಿವೆ. ಹೀಗಾಗಿ ಬೆದರಿಕೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೌಪ್ಯ ಸ್ಥಳದಲ್ಲಿ ವಿಚಾರಣೆ
ಜಂಟಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಮತ್ತು ಸಿಸಿಬಿ ಡಿಸಿಪಿ ಅಭಿಷೇಕ್ ಗೋಯಲ್ ನೇತೃತ್ವದ ತಂಡ ಮೆಹ್ದಿಯನ್ನು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದೆ. ಇಸಿಸ್ ಉಗ್ರರ ಜತೆ ನೇರ ಸಂಪರ್ಕ ಹೊಂದಿರುವ ಸಾಧ್ಯತೆ ಮತ್ತು ಟ್ವಿಟರ್ ಮೂಲಕ ಪಾಶ್ಚಿಮಾತ್ಯ ರಾಷ್ಟ್ರಗಳು ಸೇರಿದಂತೆ ಪ್ರಪಂಚದಾದ್ಯಂತ ಜಿಹಾದ್ ಹರಡಲು ಇಸಿಸ್ ಅಥವಾ ಬೇರೆ ಮೂಲಗಳಿಂದ ಹಣಕಾಸಿನ ನೆರವು ಪಡೆದಿದ್ದಾನೆಯೇ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೈಸೂರಿಗೆ ಭೇಟಿ
ಆರೋಪಿ ಮೆಹ್ದಿ ಆಗಾಗ ಮೈಸೂರಿಗೆ ಭೇಟಿ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಆದರೆ ಆತ ಮೈಸೂರಿಗೆ ಭೇಟಿ ನೀಡಿದ್ದರ ಹಿಂದಿನ ಉದ್ದೇಶ ಏನು ಎನ್ನುವುದು ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.