ದೇಶ

ಹೊಸ ವರ್ಷಕ್ಕೆ ರೈಲು ಪ್ರಯಾಣ ದುಬಾರಿ?

Lakshmi R

ನವದೆಹಲಿ: ರೈಲ್ವೆ ಪ್ರಯಾಣಿಕರಿಗೊಂದು ಕಹಿ ಸುದ್ದಿ! ಮುಂದಿನ ಬಜೆಟ್‌ನಲ್ಲಿ ರೈಲ್ವೆ ಪ್ರಯಾಣ ಮತ್ತು ಸರಕು ದರ ಏರಿಸುವ ಸಾಧ್ಯತೆ ಇದೆ.

ರೈಲ್ವೆ ನಿರ್ವಹಣಾ ವೆಚ್ಚದಲ್ಲಾಗುತ್ತಿರುವ ಏರಿಕೆ ಹಿನ್ನೆಲೆಯಲ್ಲಿ ಮುಂದಿನ ಬಜೆಟ್‌ನಲ್ಲಿ ರೈಲ್ವೆ ದರ ಹೆಚ್ಚಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. ಇತ್ತೀಚಿನ ತಿಂಗಳಲ್ಲಿ ರೈಲ್ವೆ ಶಕ್ತಿ ಮೂಲಗಳ ವೆಚ್ಚ ಶೇ.4 ರಷ್ಟು ಹೆಚ್ಚಾಗಿದೆ.

ರೈಲ್ವೆಯ ಘೋಷಿತ ನೀತಿಯ ಪ್ರಕಾರ ಪ್ರಯಾಣ ಮತ್ತು ಸರಕು ಸಾಗಣೆ ದರವು ಇಂಧನ ಮತ್ತು ಶಕ್ತಿ ಮೂಲಕ್ಕಾಗಿ ಮಾಡುವ ವೆಚ್ಚವನ್ನು ಅವಲಂಭಿಸಿರುತ್ತದೆ. ಇದನ್ನು ಆಧರಿಸಿ ವರ್ಷಕ್ಕೆ ಎರಡು ಬಾರಿ ರೈಲ್ವೆ ಪ್ರಯಾಣ ಮತ್ತು ಸರಕು ಸಾಗಣೆ ದರವನ್ನು ಪರಿಷ್ಕರಿಸಲಾಗುತ್ತದೆ. ಅದರಂತೆ ಕಳೆದ ಜೂನ್ ತಿಂಗಳಲ್ಲಿ ರೈಲ್ವೆ ದರ ಪರಿಷ್ಕರಿಸಲಾಗಿತ್ತು.

ಪ್ರಯಾಣ ದರವನ್ನು ಶೇ. 4.2 ಮತ್ತು ಸರಕು ಸಾಗಣೆ ದರವನ್ನು ಶೇ.1.4 ಹೆಚ್ಚಿಸಲಾಗಿತ್ತು. ಈಗ ಮತ್ತೊಂದು ಸುತ್ತಿನ ದರ ಏರಿಕೆಗೆ ರೈಲ್ವೆ ಇಲಾಖೆ ಸಿದ್ಧತೆ ನಡೆಸುತ್ತಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಸಚಿವರಿಂದಲೂ ಸುಳಿವು
ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರೈಲ್ವೆಯ ಒಂದಷ್ಟು ಹೊರೆಯನ್ನು ಜನರಿಗೆ ವಾರ್ಗಯಿಸುವುದು ಅನಿವಾರ್ಯ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು. ಈ ಮೂಲಕ ರೈಲ್ವೆ ಪ್ರಯಾಣ ದರ ಏರಿಕೆಯ ಸುಳಿವು ನೀಡಿದ್ದರು.

ದರ ಏರಿಸುವ ಮೊದಲು ಪ್ರಯಾಣಿಕರಿಗೆ ಸಿಗುವ ಸೇವೆ ಸುಧಾರಣೆಯಾಗಬೇಕು. ಇದರ ಜತೆಗೆ, ಸುರಕ್ಷತೆಯ ವಿಚಾರದಲ್ಲೂ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ. ಇದೆಲ್ಲ ಸಾಧ್ಯವಾಗಬೇಕಾದರೆ ದೊಡ್ಡ ಮಟ್ಟದ ಹೂಡಿಕೆ ಬೇಕು.

ಸದ್ಯ ರೈಲ್ವೆಯು ದೊಡ್ಡಮಟ್ಟದ ಬಂಡವಾಳ ಹೂಡುವ ಸ್ಥಿತಿಯಲ್ಲಿಲ್ಲ. ಹಾಗಾಗಿ ರೈಲ್ವೆ ಆಗುತ್ತಿರುವ ನಷ್ಟದ ಒಂದಷ್ಟು ಹೊರೆಯನ್ನು ಪ್ರಯಾಣಿಕರಿಗೆ ವರ್ಗಾಯಿಸುವುದು ಅನಿವಾರ್ಯ ಎಂದಿದ್ದರು ಪ್ರಭು.

SCROLL FOR NEXT