ದೇಶ

ಭಾರತೀಯ ಮೂಲದ ವಿವೇಕ್ ಅಮೆರಿಕ ವೈದ್ಯಕೀಯ ನಿರ್ದೇಶಕ

Srinivasamurthy VN

ನ್ಯೂಯಾರ್ಕ್: ಅಮೆರಿಕದ ವೈದ್ಯಕೀಯ ಇಲಾಖೆಯ ಉನ್ನತ ಹುದ್ದೆಗೆ ಭಾರತೀಯ ಮೂಲದ ವಿವೇಕ್ ಮೂರ್ತಿ ಅವರು ಆಯ್ಕೆಯಾಗಿದ್ದು, ಈ ಹುದ್ದೆ ಅಲಂಕರಿಸಿದ ಮೊದಲ ಭಾರತೀಯ ಎಂಬ ಖ್ಯಾತಿ ಗಳಿಸಿದ್ದಾರೆ.

ಅಮೆರಿಕ ಸೆನೆಟ್ ಡಾ.ವಿವೇಕ್ ಮೂರ್ತಿ ಅವರನ್ನು ವೈದ್ಯಕೀಯ ನಿರ್ದೇಶಕರಾಗಿ (surgeon general)ಆಯ್ಕೆ ಮಾಡಿದ್ದು, ಸೆನೆಟ್‌ನ 51 ಮತಗಳ ಪೈಕಿ ವಿವೇಕ್ ಮೂರ್ತಿ ಅವರು 43 ಮತಗಳನ್ನು ಗಳಿಸಿಕೊಂಡಿದ್ದಾರೆ. ಆ ಮೂಲಕ 'ಅಮೆರಿಕ ಡಾಕ್ಟರ್‌' ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಮೆರಿಕ ವೈದ್ಯಕೀಯ ಇಲಾಖೆಯ ಉನ್ನತ ಹುದ್ದೆ ಎಂದೇ 'ವೈದ್ಯಕೀಯ ನಿರ್ದೇಶಕ' ಹುದ್ದೆಯನ್ನು ಪರಿಗಣಿಸಲಾಗಿದ್ದು, 10 ತಿಂಗಳ ಮೊದಲೇ ಅಮೆರಿಕ ಸೆನೆಟ್‌ನಲ್ಲಿ ಈ ಬಗ್ಗೆ ಮತದಾನ ನಡೆಯಬೇಕಿತ್ತು. ಆದರೆ ಕಾರಣಾಂತರಗಳಿಂದ ಮತದಾನ ವಿಳಂಬವಾಗಿತ್ತು.

ಅಮೆರಿಕದ ರಾಷ್ಟ್ರೀಯ ಶಸ್ತ್ರಾಸ್ತ್ರ ನಿರ್ಮಾಣ ಸಂಸ್ಥೆಗಳ ಸಂಘದ ತೀವ್ರ ವಿರೋಧ ಮತ್ತು ಲಾಬಿಯ ನಡುವೆಯೂ ವಿವೇಕ್ ಮೂರ್ತಿ ಅವರು ಸ್ಪಷ್ಟ ಬಹುಮತ ಗಳಿಸುವ ಮೂಲಕ ಅಮೆರಿಕ ಡಾಕ್ಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 39 ವರ್ಷದ ಡಾ. ವಿವೇಕ್‌ಮೂರ್ತಿ ಅವರು ಉನ್ನತ ಹುದ್ದೆ ಅಲಂಕರಿಸುವ ಮೂಲಕ ಈ ಹುದ್ದೆ ಅಲಂಕರಿಸಿದ ಅತಿ ಚಿಕ್ಕ ವಯಸ್ಸಿನ ಮತ್ತು ಮೊದಲ ಭಾರತೀಯನೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಅಧ್ಯಕ್ಷ ಬರಾಕ್ ಒಬಾಮ ಶುಭಾಷಯ
ಅಮೆರಿಕದ ವೈದ್ಯಕೀಯ ನಿರ್ದೇಶಕರಾಗಿ ಆಯ್ಕೆಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ ಡಾ. ವಿವೇಕ್ ಮೂರ್ತಿ ಅವರಿಗೆ ಅಮೆರಿಕ ಅಧ್ಯಕ್ಷ ಬರಾಮ ಅವರು ಶುಭಾಷಯ ಕೋರಿದ್ದು, 'ಅಮೆರಿಕ ಪ್ರಜೆಗಳಿಗೆ ವಿವೇಕ್ ಮೂರ್ತಿ ಅವರು ಉನ್ನತ ಸೇವೆ ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಅಮೆರಿಕ ಪ್ರಜೆಗಳ ಆರೋಗ್ಯ ಮಟ್ಟ ಸುಧಾರಣೆಗಾಗಿ ಡಾ. ವಿವೇಕ್ ಮೂರ್ತಿ ಅವರು ತಳಮಟ್ಟದಿಂದ ಶ್ರಮಿಸಲಿದ್ದಾರೆ ಎಂದು ಹೇಳಿದರು.

SCROLL FOR NEXT