ಸಿಡ್ನಿ: ಸತತ 17 ಗಂಟೆಗಳ ಕಾಲ ಇಡೀ ವಿಶ್ವವನ್ನು ಆತಂಕಕ್ಕೆ ದೂಡಿದ್ದ ಸಿಡ್ನಿ ಕಾಫಿ ಕೆಫೆ ಒತ್ತೆಯಾಳು ಪ್ರಕರಣದ ರೂವಾರಿ ಇರಾನ್ ಮೂಲದ ಹಾರನ್ ಮೋನಿಸ್ ಎಂದು ತಿಳಿದುಬಂದಿದೆ.
ಹಾರನ್ ಮೋನಿಸ್ ಮೂಲತಃ ಇರಾನ್ ಮೂಲದ ಪ್ರಜೆಯಾಗಿದ್ದು, 1996ರಲ್ಲಿ ಆಸ್ಟ್ರೇಲಿಯಾಗೆ ಬಂದು ನೆಲೆಸಿದ್ದ. ಸುಮಾರು 50 ವರ್ಷದ ಹಾರನ್ ಮೋನಿಸ್ ಆಸ್ಟ್ರೇಲಿಯಾದಲ್ಲಿ ಇಸ್ಲಾಂ ಧರ್ಮಗುರುವಾಗಿದ್ದ. ಆಫ್ಘಾನಿಸ್ತಾನದಲ್ಲಿನ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಆಸ್ಟ್ರೇಲಿಯಾ ಪಡೆಗಳನ್ನು ರವಾನಿಸುವ ಕುರಿತು ಆಸಿಸ್ ಸರ್ಕಾರ ನಿರ್ಧಾರ ಕೈಗೊಂಡಿದ್ದಾಗ ಬಹಿರಂಗವಾಗಿಯೇ ಅದನ್ನು ವಿರೋಧಿಸಿದ್ದ. ಅಲ್ಲದೆ ತನ್ನನ್ನು ತಾನೇ ಸ್ವಯಂಘೋಷಿತ ಧಾರ್ಮಿಕ ಗುರು ಎಂದು ಬಿಂಬಿಸಿಕೊಂಡಿದ್ದ ಎಂದು ಸಿಡ್ನಿ ಪೊಲೀಸ್ ಮೂಲಗಳು ತಿಳಿಸಿವೆ.
ಈತ ಆಸ್ಟ್ರೇಲಿಯಾಗೆ ಬಂದು ನೆಲೆಸಿದ ಬಳಿಕ ತನ್ನ ಹೆಸರನ್ನು 'ಕ್ಲೆರಿಕ್' ಎಂದು ಬದಲಿಸಿಕೊಂಡಿದ್ದನಂತೆ. ಸಿಡ್ನಿ ಪೊಲೀಸರಿಗೆ ಹಾರನ್ ಮೋನಿಸ್‌ನ ಪರಿಚಯ ಚೆನ್ನಾಗಿಯೇ ಇತ್ತು. ಏಕೆಂದರೆ ಈ ಹಿಂದೆ ಹಲವು ಪ್ರಕರಣಗಳಲ್ಲಿ ಹಾರನ್ ಮೋನಿಸ್ ಸಿಡ್ನಿ ಪೊಲೀಸರ ಅತಿಥಿಯಾಗಿದ್ದ. ಪ್ರಮುಖವಾಗಿ ಎರಡು ಪ್ರಕರಣಗಳಲ್ಲಿ ಈತ ಜೈಲು ಶಿಕ್ಷೆ ಅನುಭವಿಸಿದ್ದನಂತೆ. ತನ್ನ ಮಾಜಿ ಪತ್ನಿಯ ಕೊಲೆ ಪ್ರಕರಣ ಮತ್ತು ಯುವತಿ ಮತ್ತು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಮೇರೆಗೆ ಜೈಲು ಶಿಕ್ಷೆ ಅನುಭವಿಸುತ್ತಿದ್ದನಂತೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಈತ ಜಾಮೀನಿನ ಮೇಲೆ ಹೊರಬಂದಿದ್ದನು ಎಂದು ಮೂಲಗಳು ತಿಳಿಸಿವೆ.
ಇಸ್ಲಾಂ ದೇಶಗಳಲ್ಲಿ ನಡೆಯುತ್ತಿದ್ದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ಬಲವಾಗಿ ಖಂಡಿಸುತ್ತಿದ್ದ ಹಾರನ್ ಮೋನಿಸ್ ತನ್ನ ಅಧಿಕೃತ ವೆಬ್‌ಸೈಟಿನಲ್ಲಿ ಈ ಬಗ್ಗೆ ಟೀಕಿಸಿ ವರದಿ ಬರೆಯುತ್ತಿದ್ದನಂತೆ. ಇರಾಕ್, ಇರಾನ್, ಲೆಬೆನಾನ್, ಸಿರಿಯಾ ಮತ್ತು ಆಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಮಿತ್ರಪಡೆಗಳು ನಡೆಸುತ್ತಿದ್ದ ಕಾರ್ಯಾಚರಣೆಯನ್ನು ಕಟು ಶಬ್ದಗಳಲ್ಲಿ ಖಂಡಿಸುತ್ತಿದ್ದನಂತೆ. ಅಲ್ಲದೇ ಅಮೆರಿಕದ ಡ್ರೋನ್ ಮತ್ತು ವಾಯು ಸೇನೆಯ ದಾಳಿಗಳ ಕುರಿತಂತೆ ಸತ್ತ ಮಕ್ಕಳ ಚಿತ್ರವನ್ನು ವೆಬ್‌ಸೈಟಿನಲ್ಲಿ ಹಾಕುವ ಮೂಲಕ ಇದು 'ಅಮೆರಿಕದ ಭಯೋತ್ಪಾದನೆಗೆ ಸಾಕ್ಷಿ' ಎಂದು ಟೀಕಿಸುತ್ತಿದ್ದ.
ಮೂಲತಃ ಶಿಯಾ ಮುಸ್ಲಿಂನಾಗಿರುವ ಹಾರನ್ ಮೋನಿಸ್ ಇತ್ತೀಚೆಗಷ್ಟೇ ಸುನ್ನಿಗೆ ಮತಾಂತರಗೊಂಡಿದ್ದ ಎಂದು ಹೇಳಲಾಗುತ್ತಿದೆ. ಸುನ್ನಿ ಮೂಲದ ಜಿಹಾದಿ ಸಂಘಟನೆಗಳ ಪ್ರಭಾವಕ್ಕೆ ಒಳಗಾಗಿದ್ದ ಹಾರನ್ ಮೋನಿಸ್, ಶಿಯಾ ಮುಸ್ಲಿಂ ಪಂಗಡ ದೇವರಿಂದ ತಿರಸ್ಕೃತಗೊಂಡ ಪಂಗಡವೆಂದು ನಂಬಿ ಸುನ್ನಿಗೆ ಮತಾಂತರಗೊಂಡಿದ್ದನಂತೆ.
ಸಿಡ್ನಿ ಪೊಲೀಸರು ಹೇಳಿರುವಂತೆ ಹಾರನ್ ಮೋನಿಸ್ ವಿರುದ್ಧ ಸುಮಾರು 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಬಹುತೇಕ ಪ್ರಕರಣಗಳಲ್ಲಿ ಈತನಿಗೆ ಜಾಮೀನು ದೊರೆತಿದೆಯಂತೆ. ಇನ್ನು ಈ ಪೈಕಿ 22 ಪ್ರಕರಣಗಳು ಈತ ಮಹಿಳೆಯರ ಮೇಲೆ ಮಾಡಿದ ಲೈಂಗಿಕ ದೌರ್ಜನ್ಯಗಳ ಕುರಿತಾಗಿದ್ದಂತೆ. ಉಳಿದಂತೆ 14 ಪ್ರಕರಣಗಳು ಧಾರ್ಮಿಕ ಪ್ರಚೋದನಾತ್ಮಕ ಘಟನೆಗಳಿಗೆ ಸಂಬಂಧಿಸಿದ್ದವು ಎಂದು ಮೂಲಗಳು ತಿಳಿಸಿವೆ.
ಸಿಡ್ನಿ ಕಾಫಿ ಕೆಫೆಯನ್ನು ತನ್ನ ವಶಕ್ಕೆ ಪಡೆಯುವ ಕೆಲವೇ ಕ್ಷಣಗಳ ಮುನ್ನ ಕೂಡ ಹಾರನ್ ಮೋನಿಸ್ ಕೆಫೆ ಹೊರಭಾಗದಲ್ಲಿ ನಿಂತು ಕೆಲ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದ್ದ. 'ನನ್ನ ಧರ್ಮದ ಮೇಲಾಗುತ್ತಿರುವ ದೌರ್ಜನ್ಯವನ್ನು ಪ್ರಶ್ನಿಸಿದ್ದಕ್ಕೆ ಜೈಲಿನಲ್ಲಿ ನನಗೆ ಚಿತ್ರಹಿಂಸೆ ನೀಡಲಾಯಿತು. ಇದೇ ಕಾರಣಕ್ಕಾಗಿ ನನ್ನ ವಿರುದ್ಧ ಪ್ರಕರಣಗಳು ದಾಖಲಾಗಿವೆ' ಎನ್ನುವ ಬರಹಗಳಿರುವ ಭಿತ್ತಿ ಪತ್ರಗಳನ್ನು ಆತ ಪ್ರದರ್ಶಿಸಿದ್ದ. ಅಲ್ಲದೇ ತನ್ನನ್ನು ತಾನೇ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್‌ಗೆ ಹೋಲಿಕೆ ಮಾಡಿಕೊಳ್ಳುವ ಮೂಲಕ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದ ಎಂದು ಸಿಡ್ನಿ ಪೊಲೀಸ್ ಮೂಲಗಳು ತಿಳಿಸಿವೆ.
ಯಾವುದೇ ಸಂಘಟನೆಯ ಕೈವಾಡ ಕಾಣುತ್ತಿಲ್ಲ ಭದ್ರತಾ ತಜ್ಞರ ಅಭಿಮತ
ಇದೇ ವೇಳೆ ಸಿಡ್ನಿ ಕಾಫಿ ಕೆಫೆ ಒತ್ತೆಯಾಳು ಪ್ರಕರಣದಲ್ಲಿ ಯಾವುದೇ ಉಗ್ರ ಸಂಘಟನೆಗಳ ಕೈ ವಾಡ ಕಾಣುತ್ತಿಲ್ಲ ಎಂದು ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದೊಂದು ಓರ್ವ ವ್ಯಕ್ತಿಯ ಅತಿರೇಕದ ಅಮಾನುಷ ವರ್ತನೆ ಎಂದು ಹೇಳಿದ್ದಾರೆ.
ಒಟ್ಟಾರೆ ಕಾಫಿ ಕೆಫೆ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡಿಸಲು ಸಿಡ್ನಿ ಪೊಲೀಸರು ಹರ ಸಾಹಸವನ್ನೇ ಪಟ್ಟಿದ್ದಾರೆ. ನಿನ್ನೆ ಬೆಳಗ್ಗೆಯಿಂದಲೂ ನಡೆಯುತ್ತಿದ್ದ ಈ ಕಾರ್ಯಾಚರಣೆ ಮಧ್ಯರಾತ್ರಿ ಸುಮಾರು 2.10ರ ವೇಳೆಗೆ ಅಂತ್ಯಗೊಂಡಿದ್ದು, ಕಾಫಿ ಕೆಫೆ ಮ್ಯಾನೇಜರ್ ಮತ್ತು ಓರ್ವ ಲಾಯರ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯನ್ನು ವಿಶ್ವ ನಾಯಕರು ಖಂಡಿಸಿದ್ದು, ಭಾರತ ಪ್ರಧಾನಿ ನರೇಂದ್ರ ಮೋದಿ ಅವರು 'ಇಂತಹ ಸಂಕಷ್ಟದ ಸಮಯದಲ್ಲಿ ನಾವು ಆಸ್ಟ್ರೇಲಿಯಾ ಪ್ರಜೆಗಳೊಂದಿಗೆ ಇದ್ದೇವೆ' ಎಂದು ಟ್ವೀಟ್ ಮಾಡಿದ್ದಾರೆ.