ಬೆಂಗಳೂರು: ಇನ್ನೆರಡು ದಿನಗಳಲ್ಲಿ ರಾಜ್ಯದ ಪ್ರಯಾಣಿಕರಿಗೆ ರಸ್ತೆ ಸಾರಿಗೆ ಸಂಸ್ಥೆಗಳಿಂದ ಸಿಹಿ ಸುದ್ದಿ ಸಿಗುವ ಎಲ್ಲಾ ಸಾಧ್ಯತೆಗಳಿವೆ.
ಡೀಸೆಲ್ ದರದಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಸಾರಿಗೆ ದರದಲ್ಲಿ ಇಳಿಕೆ ಮಾಡುವ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಇನ್ನೆರಡು ದಿನಗಳಲ್ಲಿ ಇಳಿಕೆ ಮಾಡುವ ಸಂಬಂಧ ಅಧಿಕೃತ ಘೋಷಣೆ ಹೊರಡಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಎರಡು ದಿನಗಳ ಹಿಂದಷ್ಟೇ ಅವರು ಅಧಿಕಾರಿಗಳ ಜತೆ ಈ ಕುರಿತಂತೆ ಎದುರಾಗುವ ಸಾಧ್ಯಾ ಸಾಧ್ಯತೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸದ್ಯ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸದನದಲ್ಲೇ ಈ ಕುರಿತು ಘೋಷಣೆ ಹೊರಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಆಗಸ್ಟ್‌ನಿಂದ ಇಲ್ಲಿವರೆಗೆ ಕೇಂದ್ರ ಸರ್ಕಾರ 5 ಬಾರಿ ಡೀಸೆಲ್ ದರ ಇಳಿಕೆ ಮಾಡಿದೆ. ಅಂದರೆ 13 ಇಳಿಸಿದೆ. ಪೆಟ್ರೋಲ್ ಕೂಡ 8 ಬಾರಿ ಇಳಿಕೆಯಾಗಿದೆ.
ಆದರೆ ಡೀಸೆಲ್ ದರ ಹೆಚ್ಚಾದ ರಾತ್ರಿಯೇ ಬಸ್ ದರ ಏರಿಕೆ ಮಾಡುವ ರಾಜ್ಯ ಸರ್ಕಾರ, ಡೀಸೆಲ್ ದರ ಇಳಿದರೂ ಏಕೆ ಬಸ್ ದರ ಇಳಿಕೆ ಮಾಡಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆ.