ದೇಶ

ಲಖ್ವಿಗೆ ಜಾಮೀನು: ಲೋಕಸಭೆಯಲ್ಲಿ ಖಂಡನಾ ನಿರ್ಣಯ ಮಂಡನೆ

Srinivasamurthy VN

ನವದೆಹಲಿ: ಮುಂಬೈ ಸ್ಫೋಟ ಪ್ರಕರಣದಲ್ಲಿ ಉಗ್ರ ಝಕಿವುರ್ ರೆಹಮಾನ್‌ಗೆ ಜಾಮೀನು ನೀಡಿದನ್ನು ವಿರೋಧಿಸಿ ಶುಕ್ರವಾರ ಲೋಕಸಭೆಯಲ್ಲಿ ಖಂಡನಾ ನಿರ್ಣಯ ಮಂಡಿಸಲಾಗಿದೆ.

ಮುಂಬೈ ಸ್ಫೋಟ ರೂವಾರಿ ಉಗ್ರ ಮುಖಂಡ ಝಕಿವುರ್ ರೆಹಮಾನ್‌ಗೆ ಜಾಮೀನು ನೀಡಿರುವ ಪಾಕಿಸ್ತಾನ ನ್ಯಾಯಾಲಯದ ತೀರ್ಪಿನ ವಿರುದ್ಧ ಲೋಕಸಭೆಯಲ್ಲಿ ಖಂಡನೆ ವ್ಯಕ್ತವಾಗಿದ್ದು, ಎಲ್‌ಇಟಿ ಮುಖಂಡನಿಗೆ ನ್ಯಾಯಾಲಯ ನೀಡಿರುವ ಜಾಮೀನಿಂದಾಗಿ ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ. ಹೀಗಾಗಿ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸುವ ಅಗತ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಅಂತೆಯೇ ಪೇಶಾವರದ ಉಗ್ರರ ಪೈಶಾಚಿಕ ಕೃತ್ಯದ ಹಿನ್ನಲೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ಮಕ್ಕಳ ಮೇಲಿನ ದಾಳಿ ಪ್ರಕರಣದಿಂದ ಪಾಕಿಸ್ತಾನ ಎಷ್ಟು ನೋವು ಅನುಭವಿಸಿದೆಯೋ ಅದಕ್ಕಿಂತಲೂ ಹೆಚ್ಚಿನ ನೋವನ್ನು ಭಾರತ ಅನುಭವಿಸಿದೆ. ಪ್ರತಿಯೊಬ್ಬ ಭಾರತೀಯನೂ ಪೇಶಾವರ ಘಟನೆಗೆ ಕಣ್ಣೀರು ಹಾಕಿದ್ದಾನೆ. ಆದರೆ ಘಟನೆ ನಡೆದ 48 ಗಂಟೆಗಳಲ್ಲೇ ಉಗ್ರನಿಗೆ ಜಾಮೀನು ನೀಡಿರುವುದು ನಿಜಕ್ಕೂ ಆಘಾತವಾಗಿದೆ'.

'ಮುಂಬೈ ದಾಳಿ ಕುರಿತಂತೆ ಉಗ್ರರಿಗೆ ಶಿಕ್ಷೆಯಾಗುವವರೆಗೂ ಭಾರತ ತನ್ನ ರಾಯಭಾರಿಗಳ ಮುಖಾಂತರವಾಗಿ ಒತ್ತಡ ಹೇರುತ್ತಲೇ ಇರುತ್ತದೆ. ಇದು ನಮಗೆ ಭಾವನಾತ್ಮಕ ವಿಚಾರವಾಗಿದ್ದು, ಪಾಕಿಸ್ತಾನಕ್ಕೆ ಇದರ ಅರಿವು ಮೂಡಿಸಲು ನಿರಂತರ ಪ್ರಯತ್ನಿಸುತ್ತೇವೆ' ಎಂದು ಪ್ರಧಾನಿ ಮೋದಿ ಹೇಳಿದರು. ಇನ್ನು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಾತನಾಡಿ, 'ಸಾಕ್ಷ್ಯಾಧಾರದ ಕೊರತೆ ಹಿನ್ನಲೆಯಲ್ಲಿ ಲಖ್ವಿಗೆ ಜಾಮೀನು ನೀಡಲಾಗಿದೆ ಎಂಬ ಅಂಶವನ್ನು ನಾವು ಒಪ್ಪುವುದಿಲ್ಲ. ಜಾಮೀನಿನ ಹಿಂದೆ ಷಡ್ಯಂತ್ರವಡಗಿದೆ' ಎಂದು ಹೇಳಿದರು.

ಇಸ್ಲಾಮಾಬಾದಿನಲ್ಲಿರುವ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ನಿನ್ನೆ ಮುಂಬೈ ದಾಳಿ ಪ್ರಕರಣ ಕುರಿತಂತೆ ವಿಚಾರಣೆ ನಡೆಸಿ, ಲಷ್ಕರ್ ಇ ತೋಯ್ಬಾ ಸಂಘಟನೆ ಮುಖ್ಯಸ್ಥ ಝಕಿ ವುರ್ ರೆಹಮಾನ್ ಲಖ್ವಿಗೆ ನಿನ್ನೆ ಜಾಮೀನು ನೀಡಿತ್ತು. ಪ್ರಕರಣದಲ್ಲಿ ಲಖ್ವಿ ಕೈವಾಡದ ಕುರಿತು ಯಾವುದೇ ಪ್ರಮುಖ ಸಾಕ್ಷ್ಯಾಧಾರಗಳಿಲ್ಲದ ಕಾರಣ ಜಾಮೀನು ನೀಡಲಾಗುತ್ತಿದೆ ಎಂದು ಹೇಳಿತ್ತು.

SCROLL FOR NEXT