ದೇಶ

'ಬೆಳ್ಳಿ ಚಮಚೆಯೊಂದಿಗೆ ಹುಟ್ಟಿದ ರಾಹುಲ್‌ಗೆ ಹಣದುಬ್ಬರದ ಬಗ್ಗೇನು ಗೊತ್ತು..?

Srinivasamurthy VN

ಚೆನ್ನೈ: ಹುಟ್ಟಿನಿಂದಲೇ ಶ್ರೀಮಂತಿಕೆಯಲ್ಲಿ ಬೆಳೆದ ರಾಹುಲ್ ಗಾಂಧಿ ಅವರಿಗೆ ಹಣದುಬ್ಬರದ ಬಗ್ಗೇನು ಗೊತ್ತು..? ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದ್ದಾರೆ.

ಚೆನ್ನೈನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 'ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಂತೆಯೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕವೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸುತ್ತಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದರು. ಆದರೆ ರಾಹುಲ್ ಗಾಂಧಿ ಅವರು ಒಂದನ್ನು ಮರೆತಿದ್ದಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ ಗಡಿಯಲ್ಲಿ ಪಾಕಿಸ್ತಾನ ಸೈನಿಕರು ಗುಂಡಿನ ದಾಳಿ ಆರಂಭಿಸಿದರೆ ಅವರೇ ಅದನ್ನು ಅಂತ್ಯಗೊಳಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದ್ದು, ಪಾಕಿಸ್ತಾನ ಗುಂಡಿನ ದಾಳಿ ನಡೆಸಿದರೆ ಭಾರತೀಯ ಸೈನಿಕರು ಗುಂಡಿನ ದಾಳಿಯನ್ನು ಅಂತ್ಯಗೊಳಿಸುತ್ತಿದ್ದಾರೆ'.

'ಬಿಜೆಪಿ ಸರ್ಕಾರ ದೇಶದ ಜನತೆಗೆ ಏನು ಮಾಡಿದೆ ಎಂದು ರಾಹುಲ್ ಗಾಂಧಿ ಅವರು ಕೇಳುತ್ತಿದ್ದಾರೆ. ಆದರೀಗ ನಾನು ಕೇಳುತ್ತಿದ್ದೇನೆ 60 ವರ್ಷಗಳ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಮಾಡಿದ್ದೇನು..? ಹಗರಣಗಳ ಸರಮಾಲೆಯನ್ನೇ ಸುತ್ತಿಕೊಂಡು ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿದಿದೆ. ಆದರೆ ನಾನು ಹೇಳುತ್ತಿದ್ದೇನೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಹಗರಣಗಳನ್ನು ಬೆನ್ನಿಗೆ ಕಟ್ಟಿಕೊಳ್ಳದೇ ಜನರ ಮುಂದೆ ಬರುತ್ತದೆ'.

'ಅಗತ್ಯ ವಸ್ತುಗಳ ಬೆಲೆ ಮತ್ತು ಡೀಸೆಲ್, ಪೆಟ್ರೋಲ್ ದರ ಇಳಿಕೆ ಸೇರಿದಂತೆ ಕಳೆದ ಆರು ತಿಂಗಳ ನರೇಂದ್ರ ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ದೊಡ್ಡ ಪಟ್ಟಿಯೇ ಇದೆ. ಹುಟ್ಟುವಾಗಲೇ ಬೆಳ್ಳಿ ಚಮಚೆಯೊಂದಿಗೆ ಹುಟ್ಟಿದ ನಿಮಗೆ ಹಣದುಬ್ಬರ ಮತ್ತು ಬೆಲೆ ಏರಿಕೆ, ಇಳಿಕೆ ಕುರಿತು ಅರಿವಿರುವುದಿಲ್ಲ' ಎಂದು ಶಾ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಸಭೆಯುದ್ದಕ್ಕೂ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, 2ಜಿ, ವಿವಿಐಪಿ ಕಾಪ್ಟರ್ ಹಗರಣ, ಆದರ್ಶ ಹಗರಣ ಮತ್ತು ಕಲ್ಲಿದ್ದಲು ಹಗರಣಗಳ ಕುರಿತು ವಾಗ್ದಾಳಿ ನಡೆಸಿದರು. ಅಲ್ಲದೆ 2ಜಿ ಹಗರಣಗಳ ಕುರಿತು ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ಜನತೆಗೆ ಉತ್ತರಿಸಲೇ ಬೇಕು ಎಂದು ಆಗ್ರಹಿಸಿದರು.

ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವನ್ನು ಬಲಗೊಳಿಸುವ ದೃಷ್ಟಿಯಿಂದ ಕಾರ್ಯಕರ್ತರ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಅಮಿತ್ ಶಾ ಅವರು ಚೆನ್ನೈಗೆ ಆಗಮಿಸಿದ್ದು, ಇಲ್ಲಿ ಬಿಜೆಪಿ 60 ಲಕ್ಷ ಕಾರ್ಯಕರ್ತರನ್ನು ನೋಂದಾಯಿಸಿಕೊಳ್ಳುವ ಗುರಿಹೊಂದಿದೆ.

SCROLL FOR NEXT