ಇಸ್ಲಾಮಾಬಾದ್: ಪೇಶಾವರ ಸೈನಿಕ ಶಾಲೆ ಮೇಲಿನ ದಾಳಿ ಬಳಿಕ ಪಾಕಿಸ್ತಾನ ಸರ್ಕಾರ ಉಗ್ರರಿಬ್ಬರನ್ನು ಗಲ್ಲಿಗೇರಿಸಿದ್ದಕ್ಕೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಕಿಡಿಕಿಡಿಯಾಗಿದೆ. ಜೈಲಲ್ಲಿರುವ ಉಗ್ರರನ್ನು ಗಲ್ಲಿಗೇರಿಸುವುದನ್ನು ನಿಲ್ಲಿಸದಿದ್ದರೆ ಪ್ರಧಾನಿ ನವಾಜ್ ಷರೀಫ್ ಸೇರಿದಂತೆ ಎಲ್ಲ ರಾಜಕಾರಣಿಗಳು, ಸೇನಾ ಮುಖ್ಯಸ್ಥರ ಮಕ್ಕಳನ್ನೂ ಹತ್ಯೆ ಮಾಡುವ ಬೆದರಿಕೆ ಹಾಕಿದೆ.
ಈ ಸಂಬಂಧ ಟಿಟಿಪಿ ಪ್ರಮುಖ ಕಮಾಂಡರ್ ಮೊಹಮ್ಮದ್ ಖರಸಾನಿ ಸರ್ಕಾರಕ್ಕೆ ಬೆದರಿಕೆ ಪತ್ರವೊಂದು ಬಂದಿದ್ದು, ಇದರಲ್ಲಿ ಪೇಶಾವರ ಸೈನಿಕ ಶಾಲೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಳ್ಳಲಾಗಿದೆ. ಮೃತ ಮಕ್ಕಳು ತಮ್ಮ ಪೋಷಕರ ನಡೆಯನ್ನು ವಿರೋಧಿಸಲಿಲ್ಲ. ಹಾಗಾಗಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ. ಒಂದು ವೇಳೆ ಸರ್ಕಾರ ಜೈಲಲ್ಲಿರುವ ಉಗ್ರರನ್ನು ಗಲ್ಲಿಗೇರಿಸುವುದು ಮುಂದುವರಿಸಿದರೆ ಮತ್ತಷ್ಟು ಮಕ್ಕಳ ಹತ್ಯೆಯಾಗಲಿದೆ. ರಾಜಕಾರಣಿಗಳು, ಸೇನಾ ಅಧಿಕಾರಿಗಳ ಮನೆ ಸೂತಕದ ಮನೆಯಾಗಲಿದೆ ಎಂದು ಟಿಟಿಪಿ ಎಚ್ಚರಿಸಿದೆ. ಸರ್ಕಾರ ಮೊದಲ ಹಂತದಲ್ಲಿ 17 ಉಗ್ರರನ್ನು ಗಲ್ಲಿಗೇರಿಸಲು ನಿರ್ಧರಿಸಿದ್ದು, ಕಂದಹಾರ್ ವಿಮಾನ ಹೈಜಾಕ್ ವೇಳೆ ಭಾರತ ಬಿಡುಗಡೆ ಮಾಡಿದ್ದ ಉಗ್ರ ಒಮರ್ ಶೇಖ್ ಇದರಲ್ಲೊಬ್ಬ.
ಮತ್ತೆ 28 ಉಗ್ರರ ಹತ್ಯೆ
ಖೈಬರ್ ಪ್ರಾಂತ್ಯದಲ್ಲಿ ಪಾಕಿಸ್ತಾನ ಸೇನೆ ನಡೆಸುತ್ತಿರುವ ವೈಮಾನಿಕ ದಾಳಿಯಲ್ಲಿ ಮತ್ತೆ 28 ತಾಲಿಬಾನ್ ಉಗ್ರರು ಹತ್ಯೆಯಾಗಿದ್ದಾರೆ. ಈ ಮೂಲಕ ಪೇಶಾವರ ಶಾಲೆ ಮೇಲಿನ ದಾಳಿ ಬಳಿಕ ಮೃತಪಟ್ಟ ಉಗ್ರರ ಸಂಖ್ಯೆ 156ಕ್ಕೇರಿದಂತಾಗಿದೆ.
ರು.6 ಸಾವಿರ ಕೋಟಿ: ಆಫ್ಘನ್ ಹೋರಾಟದಲ್ಲಿ ಬೆಂಬಲ ನೀಡಿದ ಪಾಕಿಸ್ತಾನಕ್ಕೆ ಅಮೆರಿಕದ ವಾರ್ಷಿಕ ಬಜೆಟ್‌ನಲ್ಲಿ ರು.6 ಸಾವಿರ ಕೋಟಿ ನೆರವು ನೀಡಲು ನಿರ್ಧರಿಸಲಾಗಿದೆ.
ಪಾಕಿಸ್ತಾನ್ ತಾಲಿಬಾನ್ ಮುಖ್ಯಸ್ಥ ಹತ್ಯೆ?
ಇಸ್ಲಾಮಾಬಾದ್: ಪೇಶಾವರ ಸೈನಿಕ ಶಾಲೆ ಮೇಲಿನ ದಾಳಿ ಬಳಿಕ ಪಾಕಿಸ್ತಾನ ಸೇನೆ ಆಫ್ಘನ್ ಗಡಿಯಲ್ಲಿ ನಡೆಸುತ್ತಿರುವ ವೈಮಾನಿಕ ದಾಳಿಯಲ್ಲಿ ತೆಹ್ರೀಕ್-ಎ-ತಾಲಿಬಾನ್ ಮುಖ್ಯಸ್ಥ ಮುಲ್ಲಾ ಫಜಾಲುಲ್ಲಾ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಶನಿವಾರ ಬೆಳಗ್ಗೆ ನಡೆಸಿದ ದಾಳಿಯಲ್ಲಿ ಫಜಾಲುಲ್ಲಾ ಸಾವಿಗೀಡಾಗಿದ್ದಾನೆ ಎಂದು ಪಾಕ್ ರಕ್ಷಣಾ ಸಚಿವಾಲಯದ ಟ್ವಿಟರ್ ಖಾತೆಯೊಂದರಲ್ಲಿ ತಿಳಿಸಲಾಗಿದೆ. ಆದರೆ, ಈ ವಿಚಾರ ಇನ್ನೂ ಖಚಿತಗೊಂಡಿಲ್ಲ.