ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಫಲಿತಾಂಶ ಮಂಗಳವಾರ
ಪ್ರಕಟವಾಗಲಿದ್ದು, ಯಾವುದೇ ಕಾರಣಕ್ಕೂ ನ್ಯಾಷನಲ್ ಕಾನ್ಫರೆನ್ಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಓಮರ್ ಅಬ್ದುಲ್ಲಾ, ಮತದಾನ ನಡೆಯುತ್ತಿದ್ದಾಗ ಪ್ರಧಾನಿ ಮೋದಿ ರ್ಯಾಲಿಗಳಲ್ಲಿ ಭಾಗವಹಿಸಿ ಕೇವಲ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿ ಎಂದಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಅಪ್ಪ, ಮಗನ ಆಡಳಿತ ನಡೆದಿದ್ದು, ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ. ಹಾಗಾಗಿ ಅಭಿವೃದ್ಧಿಯನ್ನು ಬಯಸಿ ಬಂದಿದ್ದೇನೆ. ಅಲ್ಲದೆ ಸಿನಿಮೋದ್ಯಮವನ್ನು ಮತ್ತೆ ಕಣಿವೆ ರಾಜ್ಯಕ್ಕೆ ತರುವ ಮೂಲಕ ಯುವಕರಿಗೆ ಉದ್ಯೋಗ ಸೃಷ್ಟಿಸುತ್ತೇನೆ ಎಂದೆಲ್ಲಾ ಹೇಳುವ ಮೂಲಕ ಮತದಾರರನ್ನು ಹುರಿದುಂಬಿಸುವ ಪ್ರಯತ್ನ ಮಾಡಿದ್ದರು.
ಆದರೆ ಮತದಾರರಿಗೆ ಯಾರ ಮೇಲೆ ಒಲವಿದೆ ಎಂಬುದು ನಾಳೆಯ ಫಲಿತಾಂಶದಲ್ಲಿ ತಿಳಿಯಲಿದೆ ಎಂದು ಮೋದಿಗೆ ತಿರುಗೇಟು ನೀಡಿದ್ದಾರೆ.
ನಾಳಿನ ಫಲಿತಾಂಶದಲ್ಲಿ ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ. ಹೀಗಾಗಿ ನಮಗೆ ಬಿಜೆಪಿಯ ಬೆಂಬಲದ ಅವಶ್ಯಕತೆ ಇಲ್ಲ. ಒಂದು ವೇಳೆ ಹಾಗಾಗದಿದ್ದರು ನಾವು ಬಿಜೆಪಿಯ ಬೆಂಬಲವನ್ನೇ ಬಯಸುವುದಿಲ್ಲ. ಅಲ್ಲದೇ ಅವರೇ ಮೈತ್ರಿಗೆ ಮುಂದಾದರೂ ಕೂಡ ನಾವು ಅವರೊಂದಿಗೆ ಸಂಧಾನವೇ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ.