ಗೌಹಾಟಿ: ಅಸ್ಸಾಂ ಬೋಡೊ ಉಗ್ರರ ಸರಣಿ ದಾಳಿ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಅಸ್ಸಾಂನ ಸೋನಿತ್‌ಪುರ ಮತ್ತು ಕೊಕ್ರಜಾರ್ ಜಿಲ್ಲೆಗಳ 4 ಪ್ರದೇಶಗಳಲ್ಲಿ ಬೋಡೋ ಉಗ್ರರು ಸರಣಿ ದಾಳಿ ನಡೆಸಿದ್ದರು.
ಅಸ್ಸಾಂನಲ್ಲಿರುವ ಬೋಡೋ ಉಗ್ರರು ಸರ್ಕಾರಕ್ಕೆ ವಿರುದ್ಧವಾಗಿ ನಡೆಸಿದ ರಾಕ್ಷಸಿ ಕೃತ್ಯಕ್ಕೆ ಮಕ್ಕಳು, ಮಹಿಳೆಯರು ಸೇರಿದಂತೆ 62 ಮಂದಿ ಸಾವನ್ನಪ್ಪಿದ್ದರು. ಸೋನಿಪತ್‌ನಲ್ಲಿ 39 ಮಂದಿ, ಕೊಕ್ರಾಜ್ ನಲ್ಲಿ 25 ಮಂದಿ, ಸಿರಂಗ್‌ನಲ್ಲಿ 3 ಮಂದಿ ಬಲಿಯಾಗಿದ್ದರು. ಬಲಿ ತೆಗೆದುಕೊಂಡರಲ್ಲದೆ, ಅಲ್ಲಿದ್ದ ಗುಡಿಸಲುಗಳಿಗೂ ಬೆಂಕಿಯಿಟ್ಟು ಪರಾರಿಯಾಗಿದ್ದರು.
ಈ ದಾಳಿಯನ್ನು ಖಂಡಿಸಿ ಸೋನಿಪತ್ ರಾಪ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗಿತ್ತು. ಮುಗ್ದರ ಜನರನ್ನು ಬಲಿತೆಗೆದುಕೊಂಡಿರುವ ಬೋಡೋ ಜನಾಂಗದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಮುಂದುವರೆದು, ಪರಿಸ್ಥಿತಿ ತೀವ್ರ ವಿಕೋಪಕ್ಕೆ ತಿರುಗಿಬಿದ್ದಿತು. ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಕಲ್ಲುತೂರಾಟ ನಡೆಸಿದರು.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇನ್ನೂ ಹಲವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮೂಲಕ ಅಸ್ಸಾಂ ದಾಳಿ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ.