ನವದೆಹಲಿ: ಅಸ್ಸಾಂನ 3 ಜಿಲ್ಲೆಗಳಲ್ಲಿ ಸರಣಿ ಸ್ಪೋಟ ನಡೆಸಿ 78 ಮಂದಿಯ ಸಾವಿಗೆ ಕಾರಣರಾದ ಬೋಡೋ ಉಗ್ರರ ದಮನಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ನೆರಯ ಭೂತಾನ್‌ನ ನೆರವು ಕೇಳಿದೆ.
11 ವರ್ಷಗಳ ಹಿಂದೆ ಉಲ್ಫಾ ಉಗ್ರರ ವಿರುದ್ಧ ನಡೆಸಿದ್ದಂಥ ಕಾರ್ಯಾಚರಣೆ ಈಗಲೂ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಉಲ್ಫಾ ಉಗ್ರರ ಸದೆಬಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭೂತಾನ್ ದೇಶದ ನೆರವು ಪಡೆಯುವ ಸಲುವಾಗಿ ಈಗಾಗಲೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭೂತಾನ್ ಪ್ರಧಾನಮಂತ್ರಿ ಟಿಶೆರಿಂಗ್ ಟೋಬ್ಗಾಯ್‌ರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಬೋಡೋ ಉಗ್ರರ ಸಂಹಾರ ಕುರಿತಂತೆ ಸುಷ್ಮಾ ಸ್ವರಾಜ್ ಅವರು ಭೂತಾನ್ ಪ್ರಧಾನಮಂತ್ರಿಯೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದ್ದು, ಬೆಂಬಲ ದೊರೆಯುವುದು ಬಹುತೇಕ ಖಚಿತವಾಗಿದೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.
ಉಗ್ರರ ದಾಳಿಗೆ ತುತ್ತಾದ ಮೂರು ಜಿಲ್ಲೆಗಳಿಗೆ ಗುರುವಾರ ಭೇಟಿ ನೀಡಿದ ರಾಜನಾಥ್‌ಸಿಂಗ್ ಅಲ್ಲಿನ ಪರಿಸ್ಥಿತಿ ಅವಲೋಕಿಸಿ, ಎನ್‌ಡಿಎಲ್‌ಬಿ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಭಾರತ-ಭೂತಾನ್ ಗಡಿಯಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸುವಲ್ಲಿ ಬೋಡೋ ಉಗ್ರರು ಯಶಸ್ವಿಯಾಗಿದ್ದು, ನಿಷೇಧಿತ ಬೋಡೋ ಉಗ್ರ ಸಂಘಟನೆಯನ್ನು ದಮನ ಮಾಡಲು ಭೂತಾನ್‌ನ ನೆರವು ಕೋರುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ರಾಜ್‌ನಾಥ್‌ಸಿಂಗ್ ಸೂಚಿಸಿದ್ದರು.