ತೆಹರಾನ್: ಇರಾನ್ ಸೇನೆಯು ವಿನೂತನ ಆತ್ಮಹತ್ಯಾ ಬಾಂಬರ್ ಡ್ರೋನ್ ವಿಮಾನವನ್ನು ಪರೀಕ್ಷೆ ಮಾಡಿದ್ದು, ಸೈನಿಕ ತರಬೇತಿ ವೇಳೆ ನಡೆದ ಪರೀಕ್ಷೆ ಯಶಸ್ವಿಯಾಗಿದೆ ಎಂದು ಮೂಲಗಳ ತಿಳಿಸಿವೆ.
ಹೊರ್ಮೊಜ್‌ನಲ್ಲಿ ಇರಾನ್ ಸೇನೆ ಹಮ್ಮಿಕೊಂಡಿರುವ ತರಬೇತಿ ವೇಳೆ ಆತ್ಮಹತ್ಯಾ ಬಾಂಬ್ ಅನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಡ್ರೋನ್ ವಿಮಾನದ ಯಶಸ್ವಿ ಪರೀಕ್ಷೆ ನಡೆದಿದೆ. ಇನ್ನೂ ಹೆಸರಿಡದ 'ಮೊಬೈಲ್ ಬಾಂಬ್' ಎಂದೇ ಕರೆಯಲಾಗುತ್ತಿರುವ ಈ ವಿಮಾನವನ್ನು ಶನಿವಾರ ಯಶಸ್ವಿಯಾಗಿ ಹಾರಾಟ ಮಾಡಲಾಗಿದೆ. ಸ್ಥಳೀಯ ಧೈನಿಕವೊಂದರ ಪ್ರಕಾರ ಈ ವಿಮಾನಕ್ಕೆ ಇರಾನ್ ಸೇನೆ 'ಯಾಸಿರ್' ಎಂದು ಹೆಸರಿಟ್ಟಿದ್ದು, ಆತ್ಮಹತ್ಯಾ ಬಾಂಬ್ ಅನ್ನು ನಿರ್ದಿಷ್ಟ ಸ್ಥಳದಲ್ಲಿ ನಿಖರ ಸಮಯದಲ್ಲಿ ಸ್ಫೋಟಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ.
ಯುದ್ಧಗ್ರಸ್ತ ಭೂ ಪ್ರದೇಶದಲ್ಲಿನ ಶತ್ರುಗಳನ್ನು ಮತ್ತು ಸಮುದ್ರ ಮಾರ್ಗವಾಗಿ ದಾಳಿ ಮಾಡುವ ಶತ್ರುಗಳನ್ನು ಗುರಿಯಾಗಿರಿಸಿಕೊಂಡು ಈ ಆತ್ಮಹತ್ಯಾ ಡ್ರೋನ್ ವಿಮಾನಗಳನ್ನು ತಯಾರಿಸಲಾಗಿದೆ ಎಂದು ಇರಾನ್ ಸೇನಾ ಮೂಲಗಳು ಸ್ಪಷ್ಟಪಡಿಸಿವೆ.
ಇರಾನ್ ಭೂಸೇನಾ ಅಧ್ಯಕ್ಷ ಜನರಲ್ ಅಹ್ಮದ್ ರೆಜಾ ಪಾರ್ದಸ್ತಾನ್ ಅವರ ನೇತೃತ್ವದಲ್ಲಿ ಈ ತರಬೇತಿ ನಡೆಯುತ್ತಿದ್ದು, ಒಟ್ಟು 6 ದಿನಗಳ ಕಾಲ ಸೈನಿಕ ತರಬೇತಿ ನಡೆಯಲಿದೆ. ಹಿಂದೂ ಮಹಾಸಾಗರದ ಉತ್ತರ ಭಾಗ, ಸೀ ಆಫ್ ಒಮನ್ ಮತ್ತು ಪರ್ಶಿಯನ್ ಗಲ್ಫ್‌ನ ಪೂರ್ವ ಭಾಗದಲ್ಲಿ ಇರಾನ್ ಸೇನೆ ತರಬೇತಿ ಪಡೆಯುತ್ತಿದೆ.