ನವದೆಹಲಿ: ಅಪಾಯಕ್ಕೆ ಸಿಲುಕಿದ ಮಹಿಳೆಯರು ರಕ್ಷಣೆಗೆ ಕರೆಗಂಟೆ ಬಾರಿಸುವ ಮೊಬೈಲ್ ಆಪ್ "ಹಿಮ್ಮತ್"ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ ಮಹಿಳೆಯರ ತುರ್ತು ಕರೆಯನ್ನು ಪೊಲೀಸ್ ಕಂಟ್ರೋಲ್ ರೂಂ ಇಲ್ಲವೇ ತಮ್ಮ ಸಂಬಂಧಿಕರಿಗೆ ಮಾಡಲು ಸಾಧ್ಯವಾಗುವಂತೆ ಈ ಅಪ್ಲಿಕೇಶನ್ (ತಂತ್ರಾಂಶ) ರೂಪಿಸಲಾಗಿದ್ದು, ಈ ಆಪ್ ಅನ್ನು ರಾತ್ರಿ ಏಕಾಂಗಿಯಾಗಿ ಪಯಣಿಸುವ ಉದ್ಯೋಗಿ ಮಹಿಳೆಯರಿಗೆ ಪೂರೈಸಲಾಗುವುದು ಎಂದು ಸಚಿವ ರಾಜನಾಥ್ ಸಿಂಗ್ ಹೇಳಿದರು.
ಅಪ್ಲಿಕೇಶನ್(ಆಪ್) ಬಗ್ಗೆ ವಿವರಿಸಿದ ದಿಲ್ಲಿ ಪೊಲೀಸ್ ಕಮಿಷನರ್ ಬಿ.ಎಸ್. ಬಸ್ಸಿ, ಈ ಆಪ್ ಡೌನ್‌ಲೋಡ್ ಮಾಡ ಬಯಸುವವರು ತಮ್ಮ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಕನಿಷ್ಟ ಇಬ್ಬರು ಸಂಬಂಧಿಗಳು ಇಲ್ಲವೇ ಮಿತ್ರರ ಹೆಸರನ್ನು ನೀಡಿ ದಿಲ್ಲಿ ಪೊಲೀಸ್ ವೆಬ್‌ಸೈಟ್‌ನಲ್ಲಿ ನೋಂದಾಯಿಸಬೇಕು ಎಂದರು.
ಒಮ್ಮೆ ಬಳಕೆದಾರ ಮಹಿಳೆ ನೋಂದಾಯಿಸಿಕೊಂಡರೆ, ಆಕೆಗೆ ಅದೇ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಬರುತ್ತದೆ. ಅದೇ ವೇಳೆ ಡೌನ್‌ಲೋಡ್ ಲಿಂಕ್ ಹಾಗೂ ರಿಜಿಸ್ಟ್ರೇಷನ್ ಕೀ ನೀಡಲಾಗುತ್ತದೆ. ಅಪ್ಲಿಕೇಶನ್‌ನ ನೋಂದಣಿ ವಿಭಾಗದಲ್ಲಿ ಕೀ ಎಂಟರ್ ಮಾಡಿದರೆ ಸಾಕು. ಇದು ಕೇವಲ ಒಂದು ಬಾರಿ ನಡೆಸುವ ಪ್ರಕ್ರಿಯೆ ಎಂದು ತಿಳಿಸಿದರು.
ತುರ್ತು ಸ್ಥಿತಿಯಲ್ಲಿ ಆಕೆ ಮೊಬೈಲ್ ಅನ್ನು ಅಲುಗಾಡಿಸಿದರೂ ಸಾಕು, ಇಲ್ಲವೇ ಪವರ್ ಬಟನ್ ಅನ್ನು ಅದುಮಿದರೂ ಸಾಕು. 30 ಸೆಕೆಂಡ್‌ಗಳ ಕಾಲ ಧ್ವನಿ ಹಾಗೂ ಚಿತ್ರೀಕರಣ ನಡೆಸುವ ಫೋನ್ ಅದನ್ನು ಪೊಲೀಸ್ ಕಂಟ್ರೋಲ್ ರೂಂಗೆ ಕಳುಹಿಸುತ್ತದೆ. ಅಪಾಯದಲ್ಲಿರುವವಳಿಗೆ ಕೂಡಲೇ ಪೊಲೀಸ್ ಕಂಟರೋಲ್ ರೂಂನಿಂದ ಕರೆ ಬರುತ್ತದೆ ಎಂದು ಬಸ್ಸಿ ಹೇಳಿದರು.