ರಾಯ್ಪುರ/ಬಿಲಾಸ್‌ಪುರ: ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯ ಅವಾಂತರಗಳು ಇನ್ನೂ ನಿಂತಿಲ್ಲ.
ಚತ್ತೀಸ್‌ಗಡದ ಬಿಲಾಸ್‌ಪುರ ಜಿಲ್ಲೆಯ ಪಂಡೇರಾ ಎಂಬಲ್ಲಿ ನಡೆದ ಶಸ್ತ್ರಚಿಕಿತ್ಸೆಯಿಂದಾಗಿ ಮತ್ತೋರ್ವ ಮಹಿಳೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ 13ಕ್ಕೇರಿದೆ.
ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯ ಅವಾಂತರದಿಂದ ಇನ್ನು 32 ಮಹಿಳೆಯರು ಅಸ್ವಸ್ಥರಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಚತ್ತೀಸ್‌ಗಡ ವೈದ್ಯಕೀಯ ಸಂಸ್ಥೆ ದುರಂತದಲ್ಲಿ ಸಾವಿಗೀಡಾದ ಮಹಿಳೆಯರ ಸಂಖ್ಯೆ 11 ಎಂದು ಹೇಳುತ್ತಿದೆ. ಆದರೆ ಮೂಲಗಳ ಪ್ರಕಾರ ದುರಂತದಲ್ಲಿ ಸಾವನ್ನಪ್ಪಿದ ಮಹಿಳೆಯರ ಸಂಖ್ಯೆ 13 ಎಂದು ತಿಳಿದು ಬಂದಿದೆ.
ಚತ್ತೀಸ್‌ಗಡ್‌ನ ಬಿಲಾಸ್‌ಪುರದಲ್ಲಿ ಕಳೆದ ಶನಿವಾರ ಸರ್ಕಾರ ಆಯೋಜಿಸಿದ್ದ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ, ಶಸ್ತ್ರಚಿಕಿತ್ಸೆಯ ನಂತರ 8 ಮಹಿಳೆಯರು ಸಾವನ್ನಪ್ಪಿದ್ದರು. ಬಿಲಾಸ್ ಪುರದಲ್ಲಿ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಈ ಶಿಬಿರದಲ್ಲಿ 80ಕ್ಕೂ ಹೆಚ್ಚು ಮಹಿಳೆಯರು ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು.