ಚೆನ್ನೈ: ಮಾದಕ ದ್ರವ್ಯ ಸಾಗಣೆ ಮತ್ತು ಸಮುದ್ರ ಗಡಿ ನಿಯಮ ಉಲ್ಲಂಘಿಸಿದ ಆರೋಪ ಮೇಲೆ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಐವರು ಮೀನುಗಾರರನ್ನು ಶ್ರೀಲಂಕಾ ಸರ್ಕಾರ ಬುಧವಾರ ಬಿಡುಗಡೆ ಮಾಡಿದೆ.
ತಮಿಳುನಾಡಿನ ಐವರು ಮೀನುಗಾರರಾದ ಎಮರ್ಸ್‌ನ್, ಪಿ. ಆಗಸ್ಟಸ್, ಆರ್. ವಿಲ್ಸನ್, ಕೆ. ಪ್ರಶಾಂತ್ ಮತ್ತು ಜೆ. ಲಾಂಗ್ಲೆಟ್ ಇಂದು ಕೊಲಂಬೊ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಇನ್ನು ಎರಡು ದಿನಗಳಲ್ಲಿ ಚೆನ್ನೈ ತಲುಪಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಮೀನುಗಾರರಿಗೆ ಕೊಲಂಬೋ ಹೈಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಶ್ರೀಲಂಕಾ ಸರ್ಕಾರ ರದ್ದುಗೊಳಿಸಿದ್ದು, ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ಮೀನುಗಾರರ ಬಿಡುಗಡೆಗೆ ಸಮ್ಮತಿಸಿದ್ದರು. ಇದೀಗ ಯಾವುದೇ ಷರತ್ತುಗಳಿಲ್ಲದೆ ಐವರು ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ.
2011ರಲ್ಲಿ ರಾಮೇಶ್ವರದಾಚೆ ಸಮುದ್ರದಲ್ಲಿ ಮೀನು ಹಿಡಿಯಲು ಹೋಗಿದ್ದ 5 ಮೀನುಗಾರರು ಲಂಕಾ ನೌಕಾ ಪಡೆಗೆ ಸಿಕ್ಕಿಬಿದ್ದಿದ್ದರು. ಅಕ್ರಮವಾಗಿ ಮಾದಕ ದ್ರವ್ಯ ಸಾಗಣೆ ಮತ್ತು ಸಮುದ್ರ ಗಡಿ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಕೊಲಂಬೋ ಹೈಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು.