ದೇಶ

ಕಿಸ್ ಆಫ್ ಲವ್ ಆಯೋಜಕರ ವಿರುದ್ಧ ದೂರು ದಾಖಲು

ಬೆಂಗಳೂರು: ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಕಿಸ್ ಆಫ್ ಲವ್ ಕಾರ್ಯಕ್ರಮ ಆಯೋಜಕರ ವಿರುದ್ಧ ಸಾಮಾಜಿಕ ಹೋರಾಟಗಾರ ವಿನಯ್‌ಕುಮಾರ್ ಎಂಬುವರು ಸಂಚಾರ ನಿರ್ವಹಣಾ ಕೇಂದ್ರದಲ್ಲಿ (ಟಿಎಂಸಿ) ದೂರು ದಾಖಲಿಸಿದ್ದಾರೆ.

ಎಂ.ಜಿ ರಸ್ತೆ ಹಾಗೂ ಟೌನ್‌ಹಾಲ್ ಮುಂಭಾಗ ರಚಿತಾ ತನೇಜಾ ಎಂಬುವರು ನಮ್ಮ ಸಂಸ್ಕೃತಿಗೆ ವಿರುದ್ಧವಾಗಿರುವ ಕಿಸ್ ಆಫ್ ಲವ್ ಕಾರ್ಯಕ್ರಮ ಆಯೋಜಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಮುಜುಗರ ಉಂಟಾಗುತ್ತದೆ.

ವಿದೇಶಿ ಸಂಸ್ಕೃತಿ ಆಚರಣೆಯ ಈ ಕಾರ್ಯಕ್ರಮದ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಹೀಗಾಗಿ ಕಿಸ್ ಆಫ್ ಲವ್ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ರಚಿತಾ ಪ್ರತಿಕ್ರಿಯೆ ಇಲ್ಲ

ಬುಧವಾರ ಸಭೆ ನಡೆಸಿ ಕಿಸ್ ಆಫ್ ಲವ್ ಆಂದೋಲನ ನಡೆಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳವುದಾಗಿ ಹೇಳಿದ್ದ ರಚಿತಾ, ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ. ಈಗಾಗಲೇ ತೀವ್ರ ವಿರೋಧ ವ್ಯಕ್ತವಾಗಿರುವುದರಿಂದ ತಮ್ಮ ವಿರುದ್ಧ ಪ್ರಕರಣ ದಾಖಲಾಗಿ ಜೈಲು, ನ್ಯಾಯಾಲಯ ಎಂದು ಓಡಾಡುವ ಬದಲು ಸುಮ್ಮನಿರುವುದು ಲೇಸು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಮುತ್ತು ಕೊಡಲು ಬಿಡಬೇಡಿ
ಫ್ರೀ ಥಿಂಕರ್ಸ್ ಸಂಘ ಆಯೋಜಿಸಿರುವ 'ಕಿಸ್ ಆಫ್ ಲವ್‌' ಕಾರ್ಯಕ್ರಮಕ್ಕೆ ಪೊಲೀಸರು ಜಾಗರಣ ವೇದಿಕೆ ಪೊಲೀಸರಲ್ಲಿ ಮನವಿ ಮಾಡಿದೆ.

ಸಂಘಟನೆಯ ಸದಸ್ಯರು ನವೆಂಬರ್ 29ರಂದು ನಗರದ ಎಂ.ಜಿ.ರಸ್ತೆಯಲ್ಲಿ 'ಕಿಸ್ ಆಫ್ ಲವ್‌' ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದು ನಾಡಿನ ಮರ್ಯಾದೆ, ಸಂಸ್ಕೃತಿಗೆ ಧಕ್ಕೆ ಬರುವಂತದ್ದಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು. ಒಂದು ವೇಳೆ ಅವರು ಕಾರ್ಯಕ್ರಮ ನಡೆಸಿದ್ದೇ ಆದಲ್ಲಿ ನಾವು ಅದನ್ನು ತಡೆಯುತ್ತೇವೆ ಎಂದು ವೇದಿಕೆಯ ಮುಖಂಡ ನಾಗೇಂದ್ರ ಪ್ರಸಾದ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮದ ಆಯೋಜಕರನ್ನು ಬಂಧಿಸಬೇಕು. ನಾಲ್ಕು ಗೋಡೆ ನಡುವೆ ನಡೆಯುವ ಇಂತಹ ಕ್ರಿಯೆಯನ್ನು ಬಹಿರಂಗವಾಗಿ ನಡೆಸುವುದು ಸಾಮಾಜಿಕ ಶಾಂತಿ ಕದಡುವ ಉದ್ದೇಶ. ಹಾಗಾಗಿ ಇದನ್ನು ತಡೆಯುವಂತೆ ಒತ್ತಾಯಿಸಿ ನಗರದ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು. ಇದಕ್ಕೆ ವಿರೋಧ ವ್ಯಕ್ತ ಪಡಿಸಿರುವ ವಿಧಾನ ಪರಿಷತ್ ಸದಸ್ಯೆ ಮೋಟಮ್ಮ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದರು. ವೇದಿಕೆ ಮುಖಂಡರಾದ ಉಲ್ಲಾಸ್, ರಾಜಣ್ಣ ಇದ್ದರು.

SCROLL FOR NEXT