ಹಿಸ್ಸಾರ್: ಸ್ವಯಂಘೋಷಿತ ದೇವಮಾನವ ಬಾಬಾ ರಾಂಪಾಲ್ ಆಶ್ರಮದಲ್ಲಿ ಪೆಟ್ರೋಲ್ ಬಾಂಬ್‌ಗಳು, ಆಸಿಡ್ ಸಿರಿಂಜ್‌ಗಳು, ಶಸ್ತ್ರಾಸ್ತ್ರಗಳು ಮತ್ತು ಮಹಿಳೆಯರ ಗರ್ಭಧಾರಣೆಯ ಪರೀಕ್ಷಾ ವಸ್ತುಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಕೊಲೆಗೆ ಕುಮ್ಮಕ್ಕು ನೀಡಿದ ಪ್ರಕರಣದಡಿ ಬಂಧನಕ್ಕೀಡಾಗಿರುವ ಬಾಬಾ ರಾಂಪಾಲ್ ಆಶ್ರಮದಲ್ಲಿ ಪೊಲೀಸರ ಶೋಧಕಾರ್ಯ ಮುಂದುವರೆದಿದ್ದು, ಈ ವೇಳೆ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಮೂರು 32 ಬೋರ್ ರಿವಾಲ್ವರ್‌ಗಳು, 19 ಏರ್‌ಗನ್‌ಗಳು, ಎರಡು ಡಿಬಿಬಿಎಲ್ 12 ಬೋರ್‌ಗಳು ಮತ್ತು 315 ಬೋರ್ ರೈಫಲ್‌ಗಳು, ಗುಂಡುಗಳನ್ನು ಸಂಗ್ರಹಿಸುವ 28 ಕಾಟ್ರಿಡ್ಜ್‌ಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇವಿಷ್ಟೇ ಅಲ್ಲದೆ ಆಶ್ರಮದ ಕೊಠಡಿಯೊಂದರಲ್ಲಿ ರಾಂಪಾಲ್ ಬೆಂಬಲಿಗರು ಸಂಗ್ರಹಿಸಿಡಲಾಗಿದ್ದ ಪೆಟ್ರೋಲ್ ಬಾಂಬ್‌ಗಳು ಪತ್ತೆಯಾಗಿದ್ದು, ಮತ್ತೊಂದು ಕೊಠಡಿಯಲ್ಲಿ ಮಹಿಳೆಯರ ಗರ್ಭಧಾರಣೆಯನ್ನು ಪರೀಕ್ಷಿಸುವ ವೈದ್ಯಕೀಯ ಪರಿಕರಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಬಾಬಾ ರಾಂಪಾಲ್ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಹರ್ಯಾಣದ ವಿಶೇಷ ತನಿಖಾ ತಂಡ (ಎಸ್‌ಐಟಿ) ಆಶ್ರಮದ ಮೂಲೆ ಮೂಲೆಯಲ್ಲಿ ಶೋಧಕಾರ್ಯ ನಡೆಸುತ್ತಿದ್ದು, ಈ ವೇಳೆ ಆಶ್ರಮದ ಶೌಚಾಲಯವೊಂದರಲ್ಲಿ ಬಂಧಿಸಿಡಲಾಗಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ರಕ್ಷಿಸಿದ್ದಾರೆ. ಪೊಲೀಸರು ಶೌಚಾಲಯದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಶೌಚಾಲಯದಲ್ಲಿ ಮಹಿಳೆಯೊಬ್ಬಳು ಪ್ರಜ್ಞೆಕಳೆದುಕೊಂಡು ಬಿದ್ದಿದ್ದಳು.
ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಮೂಲಗಳ ಪ್ರಕಾರ ಮಹಿಳೆಯ ಹೆಸರು ಬಿಜ್ಲೇಶ್ ಎಂದು ತಿಳಿದುಬಂದಿದ್ದು, ಆಕೆ ಮಧ್ಯ ಪ್ರದೇಶದ ಅಶೋಕ್‌ನಗರದ ನಿವಾಸಿ ಎಂದು ಎಸ್‌ಐಟಿ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.