ದೇಶ

30 ವರ್ಷ ಬಳಿಕ ಸೇನೆಗೆ ಹೊಸ ಫಿರಂಗಿ ಖರೀದಿ

Mainashree

ನವದೆಹಲಿ: ಬೋಫೋರ್ಸ್ನ ಕಹಿನೆನಪನ್ನು ಮರೆಸುವ ನಿಟ್ಟಿನಲ್ಲಿ ನೂತನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೆಜ್ಜೆಯಿಟ್ಟಿದ್ದಾರೆ. ಬರೋಬ್ಬರಿ 30 ವರ್ಷಗಳ ನಂತರ ರು.15, 750 ಕೋಟಿ ವೆಚ್ಚದಲ್ಲಿ ಸೇನೆಗೆ 814 ಫಿರಂಗಿಗಳನ್ನು ಖರೀದಿಸುವ ಪ್ರಸ್ತಾಪಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ.

ಕಳೆದ ವರ್ಷ ಪರಿಚಯಿಸಲಾದ ಖರೀದಿಸಿ ಮತ್ತು ನಿರ್ಮಿಸಿ(ಬೈ ಆ್ಯಂಡ್ ಮೇಕ್) ಪ್ರಕ್ರಿಯೆಯ ಅನ್ವಯ ಫಿರಂಗಿಗಳನ್ನು ಖರೀದಿಸಲಾಗುತ್ತದೆ. ಅದರಂತೆ, 100 ಫಿರಂಗಿಗಳನ್ನು ವಿದೇಶಗಳಿಂದ ಕೊಂಡುಕೊಂಡರೆ, ಉಳಿದ 714 ಅನ್ನು ಭಾರತದಲ್ಲೇ ನಿರ್ಮಿಸಲಾಗುತ್ತದೆ.

1986ರಲ್ಲಿ ಭೋಪೋರ್ಸ್ ಹಗರಣ ಬೆಳಕಿಗೆ ಬಂದ ಬಳಿಕ ಸೇನೆಗೆ ಫಿರಂಗಿಗಳನ್ನು ಖರೀದಿಸಿಯೇ ಇರಲಿಲ್ಲ. ಇದೇ ವೇಳೆ, ವಾಯುಪಡೆಯ ಅವ್ರೋ ಸಾರಿಗೆ ವಾಹನವನ್ನು ಬದಲಿಸುವ ವಿಚಾರದಲ್ಲಿ ಟಾಟಾ ಸನ್ಸ್ ಮತ್ತು ಏರ್ಬಸ್ನ ಜಂಟಿ ಬಿಡ್ ಬಗ್ಗೆ ಹಾಗೂ 106 ಸ್ವಿಸ್ ಪಿಲಾಟಸ್ ತರಬೇತಿ ವಿಮಾನವನ್ನು ಖರೀದಿಸುವ ಬಗೆಗಿನ ನಿರ್ಧಾರವನ್ನು ಮುಂದೂಡಲಾಗಿದೆ.

ಫಿರಂಗಿ ಖರೀದಿಗೆ ಸಂಬಂಧಿಸಿ ಈಗಾಗಲೇ 6 ಟೆಂಡರ್ಗಳನ್ನು ಆಹ್ವಾನಿಸಲಾಗಿತ್ತಾದರೂ, ಅನಿವಾರ್ಯ ಕಾರಣಗಳಿಂದ ಅದು ರದ್ದಾಗಿದೆ. ಶನಿವಾರ ಬೆಳಗ್ಗೆ ರಕ್ಷಣಾ ಸ್ವಾಧೀನ ಮಂಡಳಿಯೊಂದಿಗೆ ಸಭೆ ನಡೆಸಿದ ಬಳಿಕ ಪರಿಕ್ಕರ್ ಈ ನಿರ್ಧಾರ ಕೈಗೊಂಡಿದ್ದಾರೆ.

SCROLL FOR NEXT