ವಾಷಿಂಗ್ಟನ್: ಅಮೆರಿಕದ ಐವರು ವಿದ್ಯಾರ್ಥಿಗಳು ಭಾರತೀಯ ಮಕ್ಕಳ ಮೊಗದಲ್ಲಿ ನಗು ಮೂಡಿಸಲು ಮುಂದಾಗಿದ್ದಾರೆ. ಅದು ಹೇಗೆ ಗೊತ್ತಾ? ವಿಶೇಷವಾಗಿ ಅಭಿವೃದ್ಧಿಪಡಿಸಲಾದ ಸ್ವೀಟ್ ಗಮ್ (ಕ್ಸೈಲಿಟಾಲ್ ಚ್ಯೂಯಿಂಗ್ ಗಮ್) ಮೂಲಕ.
ಪೆನ್ಸಿಲ್ವೇನಿಯಾ ವಿವಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಈ ಸಿಹಿಯಾದ ಚ್ಯೂಯಿಂಗ್ ಗಮ್ ಮಕ್ಕಳಲ್ಲಿ ಕಂಡುಬರುವ ದಂತ ಕ್ಷಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಕ್ಲೈಲಿಟಾಲ್ ಎಂಬುದು ಸಕ್ಕರೆಗೆ ಪರ್ಯಾಯವಾಗಿ ಬಳಸುವ ಒಂದು ನೈಸರ್ಗಿಕ ಅಂಶವಾಗಿದ್ದು, ಇದು ದಂತಕ್ಷಯವನ್ನು ಬರದಂತೆ ತಡೆಯುವಲ್ಲಿ ಸಹಕಾರಿ. ಅಮೆರಿಕದ ವಿದ್ಯಾರ್ಥಿಗಳು ಇಸ್ಕಾನ್ನ ಅಕ್ಷಯ ಪಾತ್ರೆ ಯೋಜನೆಯೊಂದಿಗೆ ಕೈಜೋಡಿಸಿ, ಮೊದಲಿಗೆ ಬೆಂಗಳೂರಿನ ಕೊಳಗೇರಿಗಳಲ್ಲಿ ಈ ಸ್ವೀಟ್ ಗಮ್ನ ಬಳಕೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ದೇಶದ ಇತರೆ ಭಾಗಗಳಿಗೂ ವಿಸ್ತರಿಸುವ ಉದ್ದೇಶ ಹೊಂದಿದ್ದಾರೆ.
ಮೋರ್ಗನ್ ಸ್ನೈಡರ್ ಎಂಬ ವಿದ್ಯಾರ್ಥಿ 2 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು, ಕೊಳಗೇರಿಗಳಲ್ಲಿ ಸೇವೆ ಸಲ್ಲಿಸಿದ್ದ. ಇಲ್ಲಿನ ಮಕ್ಕಳಲ್ಲಿ ಹೆಚ್ಚಿನವರು ದಂತಕ್ಷಯದಿಂದ ಬಳಲುತ್ತಿರುವುದನ್ನು ಕಂಡಿದ್ದ. ಈ ಬಗ್ಗೆ ತನ್ನ ಸಹಪಾಠಿಗಳಲ್ಲಿ ತಿಳಿಸಿದ್ದ. ಐವರು ಗೆಳೆಯರು ಸೇರಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದರು.
ಇದರ ಫಲವೇ ಸ್ವೀಟ್ ಗಮ್. ವಿವಿಯ ಪ್ರೊಫೆಸರ್ಗಳ ನೆರವಿನಿಂದ ಈ ಚ್ಯೂಯಿಂಗ್ ಗಮ್ ಅನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು, ಬೆಂಗಳೂರಿಗೆ ಬಂದು ಕೊಳಗೇರಿ ಪ್ರದೇಶಗಳಲ್ಲಿರುವ ಅಂಗಡಿಗಳ ಮೂಲಕ ಅದನ್ನು ವಿತರಿಸುವ ಯೋಜನೆಗೆ ಕೈ ಹಾಕಿದ್ದಾರೆ. ಇದಕ್ಕೆ ಅಕ್ಷಯ ಪಾತ್ರೆ ನೆರವು ನೀಡಿದೆ.
ವಿತರಣೆ ಹೇಗೆ?
ಸ್ವೀಟ್ ಗಮ್ ವಿತರಣೆಗೆ 2 ದಾರಿಯನ್ನು ಕಂಡುಕೊಳ್ಳಲಾಗಿದೆ. ಮೊದಲನೆಯದ್ದು ಅಕ್ಷಯ ಪಾತ್ರೆ ಯೋಜನೆ ಮೂಲಕ ಹಂಚುವುದು, ಎರಡನೆಯದ್ದು 'ದಂತ ರಾಯಭಾರಿಗಳ ಮೂಲಕ ನೇರವಾಗಿ ವಿತರಣೆ ಮಾಡುವುದು. ಇಲ್ಲಿ ಭಾರತೀಯ ದಂತ ವೈದ್ಯ ವಿದ್ಯಾರ್ಥಿಗಳು ದಂತ ರಾಯಭಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರು ಕ್ಸೈಲಿಟಾಲ್ ಗಮ್ ಅನ್ನು ಮಾರಾಟ ಮಾಡುವಂತೆ ಅಂಗಡಿ ಮಾಲೀಕರಿಗೆ ಉತ್ತೇಜನ ನೀಡಲಿದ್ದಾರೆ. ಇದಕ್ಕೆ ಪ್ರತಿಯಾಗಿ 'ಸ್ವೀಟ್ ಬೈಟ್' ಸಂಸ್ಥೆಯು ವರ್ಷಕ್ಕೆ 10,487 (170 ಡಾಲರ್)ನಂತೆ ವಿದ್ಯಾರ್ಥಿಗಳಿಗೆ ದಂತಕಾಲೇಜಿನ ಟ್ಯೂಷನ್ಗೆ ಹಣಕಾಸಿನ ನೆರವು ನೀಡಲಿದೆ.