ನವದೆಹಲಿ: ಬಜೆಟ್ ಮಂಡನೆವೇಳೆ 'ಎರಡನೇ ತಲೆಮಾರಿನ ಸುಧಾರಣೆಯ ಸಂಪೂರ್ಣ ಸೆಟ್' ಅನಾವರಣಗೊಳ್ಳಲಿದೆ. ಸಾಕಷ್ಟು ಖುಷಿಯ ದಿನಗಳು ಮುಂದಿವೆ.
ಹೀಗೆಂದು ಹೇಳುವ ಮೂಲಕ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೇಶವಾಸಿಗಳ ಕುತೂಹಲ ಕೆರಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಜನರು, ಈ ಬಾರಿಯ ಬಜೆಟ್ ನಲ್ಲಿ ನಮಗೇನಿದೆ ಎಂದು ತಿಳಿಯುವ ಕಾತರದಲ್ಲಿದ್ದಾರೆ. ಹೀಗಾಗಿ ಜೇಟ್ಲಿ ಹೇಳಿಕೆಯು ಜನರ ಆಶಾಭಾವನೆಯನ್ನು ಇನ್ನಷ್ಟು ಹೆಚ್ಚಿಸಿದೆ.
ನೋಡ್ತಾ ಇರಿ, ಏನೇನ್ ಮಾಡ್ತೇವೆ!
ಭಾನುವಾರ ನವದೆಹಲಿಯಲ್ಲಿ ಮಾತನಾಡಿದ ಸಚಿವ ಜೇಟ್ಲಿ, ದೇಶವು ವಿವಿಧ ಕ್ಷೇತ್ರಗಳಲ್ಲಿ ಮುಕ್ತ ಅವಕಾಶವನ್ನು ಬಯಸುತ್ತಿದೆ. ಅದಕ್ಕೆ ನೀತಿ ನಿಬಂಧನೆಗಳು ಮತ್ತು ತೆರಿಗೆಯಲ್ಲಿ ಸ್ಥಿರತೆ ಮುಖ್ಯ. ಈ ನಿಟ್ಟಿನಲ್ಲಿ ನಾವು ಹೆಜ್ಜೆಯಿಟ್ಟಿದ್ದೇವೆ. ನೋಡ್ತಾ ಇರಿ, ನಮ್ಮ ಎಲ್ಲ ಪ್ರಸ್ತಾಪಗಳೂ ಒಂದೊಂದಾಗಿ ಅನುಷ್ಠಾನಗೊಳ್ಳುತ್ತಾ,
2015-16ರ ವೇಳೆಗೆ ಜಿಡಿಪಿ ಪ್ರಗತಿ ಶೇ.6ನ್ನೂ ದಾಟಲಿದೆ. ಅಲ್ಲಿಂದ ನಂತರ ನಾವು ಟೇಕ್ ಆಫ್ ಆಗುತ್ತೇವೆ. ಬಳಿಕ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಜತೆಗೆ ಕಳೆದ 6 ತಿಂಗಳಿಂದ ಎನ್ ಡಿಎ ಸರ್ಕಾರ ಕೈಗೊಂಡ ನಿರ್ಧಾರಗಳಿಂದಾಗಿ ದೇಶದ ಆರ್ಥಿಕತೆ ಮೇಲೆ ಬಿದ್ದಿದ್ದ ಕರಿನೆರಳು ಮಾಯವಾಗುತ್ತಿದೆ. ಜಾಗತಿಕ ಹೂಡಿಕೆದಾರರು ನಮ್ಮ ದೇಶದತ್ತ ನೋಡತೊಡಗಿದ್ದಾರೆ ಎಂದೂ ಜೇಟ್ಲಿ ಹೇಳಿದ್ದಾರೆ.
ಎಫ್ಎಂ ರೇಡಿಯೋ: 3ನೇ ಹಂತದ ವಿಸ್ತರಣೆ
ಹೆಚ್ಚಿನ ಆದಾಯ ಗಳಿಸುವ ಉದ್ದೇಶದಿಂದ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಎಫ್ಎಂ ರೇಡಿಯೋಗಳ 3ನೇ ಹಂತದ ವಿಸ್ತರಣೆ ಮಾಡುವ ಚಿಂತನೆಯಿದೆ ಎಂದು ಜೇಟ್ಲಿ ಹೇಳಿದ್ದಾರೆ. ಈ ಪ್ರಕ್ರಿಯೆಗೆ ಸಂಬಂಧಿಸಿ ಮಾಹಿತಿ ಮತ್ತು ಪ್ರಸಾರ ಇಲಾಖೆ ಹಾಗೂ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಕ್ರಮ ಕೈಗೊಳ್ಳುತ್ತವೆ. 3ನೇ ಹಂತದಲ್ಲಿ ದೇಶಾದ್ಯಂತ 294 ನಗರಗಳಲ್ಲಿ 800ಕ್ಕೂ ಹೆಚ್ಚು ಹೊಸ ಎಫ್ಎಂ ರೇಡಿಯೋ ಚಾನೆಲ್ಗಳು ಆರಂಭವಾಗಲಿವೆ ಎಂದೂ ಹೇಳಿದ್ದಾರೆ. ಇದೇ ವೇಳೆ, ಖಾಸಗಿ ಎಫ್ಎಂ ಚಾನೆಲ್ಗಳಲ್ಲಿ ಸುದ್ದಿ ಪ್ರಸಾರಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿಯೂ ತಿಳಿಸಿದ್ದಾರೆ. ಏತನ್ಮಧ್ಯೆ, ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಮುಂದಿನ ಹಣಕಾಸು ಪರಾಮಶೆ ವೇಳೆ ಸಾಲದ ಮೇಲಿನ ಬಡ್ಡಿ ದರ ಇಳಿಕೆ ಮಾಡಬಹುದು ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಸುಧಾರಣೆಯೆಂಬುದು ವರ್ಷದ 365 ದಿನವೂ ನಡೆಯುತ್ತದೆ. ಅದರ ದಿಕ್ಕನ್ನು ತೋರಿಸುವುದೇ ಬಜೆಟ್.
ಅರುಣ್ ಜೇಟ್ಲಿ, ವಿತ್ತ ಸಚಿವ