ದೇಶ

ಬಾಬ್ರಿ ಮಸೀದಿ ಧ್ವಂಸದ ವಾರ್ಷಿಕ ದಿನ, ಕಾಶ್ಮೀರದಲ್ಲಿ ಮೋದಿ ಚುನಾವಣಾ ಪ್ರಚಾರ

Guruprasad Narayana

ಶ್ರೀನಗರ: ಡಿಸೆಂಬರ್ ೬ ರಂದು, ಬಾಬ್ರಿ ಮಸೀದಿ ಧ್ವಂಸದ ೨೨ನೆ ವರ್ಷದ ದಿನ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರಕ್ಕೆ ಭೇಟಿ ಕೊಟ್ಟು ೨ ಚುನಾವಣಾ ಪ್ರಚಾರಸಭೆಗಳನ್ನು ಉದ್ದೇಶಿಸಿ ಶ್ರೀನಗರ ಮತ್ತು ದಕ್ಷಿಣ ಕಾಶ್ಮೀರದಲ್ಲಿ ಮಾತನಾಡಲಿದ್ದಾರೆ.

"ಪ್ರಧಾನಿ ಮೋದಿಯವರು ಡಿಸೆಂಬರ್ ೬ ರಂದು ಕಾಶ್ಮೀರಕ್ಕೆ ಭೇಟಿಕೊಟ್ಟು ಚುನಾವಣ ಪ್ರಚಾರ ಸಭೆಗಳಲ್ಲಿ ಭಾಷಣ ಮಾಡಲಿದ್ದಾರೆ. ಒಂದು ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಮತ್ತು ಇನ್ನೊಂದು ಸಭೆ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ" ಎಂದು ಕಾಶ್ಮೀರದ ಉಸ್ತುವಾರಿ, ಬಿಜೆಪಿಯ ರಾಜ್ಯ ಉಪಾಧ್ಯಕ್ಷ ರಮೇಶ್ ಅರೋರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಶ್ರೀನಗರ ಪ್ರಚಾರ ಸಭೆಯ ಮೂಲಕ ಬಿಜೆಪಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

"ಕಣಿವೆಯ ಎಲ್ಲ ಭಾಗದಿಂದಲೂ ಪಕ್ಷದ ಕಾರ್ಯಕರ್ತರು ರ್ಯಾಲಿಗೆ ಅಪಾರ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದ್ದು, ವೈಭವಪೂರ್ಣ ಪ್ರಚಾರ ಸಭೆ ಇದಾಗಲಿದೆ" ಎಂದಿದೆ ಬಿಜೆಪಿ ಪಕ್ಷ.

ಆದರೆ ಕಣಿವೆಯ ಹಲವು ಬಿಜೆಪಿ ಮುಖಂಡರು ಬಾಬ್ರಿ ಮಸೀದಿ ಧ್ವಂಸವಾದ ಡಿಸೆಂಬರ್ ೬ ಒಂದು ದಿನವನ್ನು ಬಿಟ್ಟು ಬೇರೆ ದಿನಗಳನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

"ಕಾಶ್ಮೀರ ಮುಸ್ಲಿಂ ಬಹುಸಂಖ್ಯಾತ ಪ್ರದೇಶ ಮತ್ತು ಜನ ಇನ್ನೂ ಬಾಬ್ರಿ ಮಸೀದಿ ಧ್ವಂಸವನ್ನು ನೆನಪಿಸಿಕೊಳ್ಳುತ್ತಾರೆ." ಎಂದಿದ್ದಾರೆ.

ದಕ್ಷಿಣ ಕಾಶ್ಮೀರದ ಬಹುತೇಕ ಕ್ಷೇತ್ರಗಳಿಗೆ ಮತ್ತು ಶ್ರೀನಗರ ೮ ವಿಧಾನಸಭಾ ಕ್ಷೇತ್ರಗಳಿಗೆ ೪ನೆ ಹಂತದಲ್ಲಿ ಡಿಸೆಂಬರ್ ೧೪ ರಂದು ಮತದಾನ ನಡೆಯಲಿದೆ. 

SCROLL FOR NEXT