ಫರ್ಗುಸನ್: ಕಪ್ಪುವರ್ಣೀಯ ಯುವಕನೊಬ್ಬನನ್ನು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಸಿದಂತೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿರುವ ಹತ್ಯೆಗೈದ ಭದ್ರತಾ ಅಧಿಕಾರಿ ಡಾರೆನ್ ವಿಲ್ಸನ್, ತಾನು ಶುದ್ಧ ಮನಸ್ಸಾಕ್ಷಿ ಹೊಂದಿದ್ದು, ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾನೆ.
ಈ ಕುರಿತು ಅಮೆರಿಕಾದ ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಡಾರೆನ್ ವಿಲ್ಸನ್, ಘಟನೆಯಲ್ಲಿ ತಾನೊಬ್ಬ ಭದ್ರತಾ ಸಿಬ್ಬಂದಿಯಾಗಿ ತಾನು ಮಾಡಬೇಕಿದ್ದ ಕರ್ತವ್ಯವನ್ನಷ್ಟೇ ಪಾಲಿಸಿದ್ದು, ಇದರಲ್ಲಿ ನನ್ನ ತಪ್ಪೇನು ಇಲ್ಲ, ನನಗೆ ನನ್ನ ಕೆಲಸದ ಬಗ್ಗೆ ಅರಿವಿದೆ ಎಂದು ಸಮರ್ಥಿಸಿಕೊಂಡಿದ್ದಾನೆ.
ಅಲ್ಲದೇ, ಮೂರು ವರ್ಷಗಳಿಂದ ತನ್ನ ಬಂದೂಕನ್ನು ಬಳಕೆ ಮಾಡದೇ ಇರುವುದಾಗಿ ಹೇಳಿರುವ ಆತ, ಬ್ರೌನ್‌ನ ಮೇಲೆ ಮೊದಲ ಬಾರಿಗೆ ಪ್ರಯೋಗ ಮಾಡಲಾಗಿದೆ ಎಂದು ಹೇಳಿದ್ದಾನೆ.
ಇದೇ ವರ್ಷ ಆಗಸ್ಟ್ 9 ರಂದು ಭದ್ರತಾ ಅಧಿಕಾರಿಯೊಬ್ಬ 18 ವರ್ಷದ ಕಪ್ಪು ವರ್ಣೀಯ ಯುವಕನೊಬ್ಬನಿಗೆ ನಿರಂತರವಾಗಿ ಗುಂಡಿನ ಮಳೆಗೆರೆದು ಹತ್ಯೆ ಮಾಡಿದ್ದನು. ಈ ಘಟನೆ ದೇಶದಾದ್ಯಂತ ಭಾರೀ ಸುದ್ದಿ ಮಾಡಿದ್ದು, ಅಧಿಕಾರಿಯ ಈ ವರ್ತನೆ ವಿರೋಧಿಸಿ ಅಮೆರಿಕದ ಕಪ್ಪು ವರ್ಣಿಯರು ಬೃಹತ್ ಪ್ರತಿಭಟನೆ ನಡೆಸಿದ್ದರು.
ಅಂದು ನಡೆದ ಬೃಹತ್ ಪ್ರತಿಭಟನೆ ಭದ್ರತಾ ಸಿಬ್ಬಂದಿ ಹಾಗೂ ಪ್ರತಿಭಟನಾಕಾರರ ಮಧ್ಯೆ ಕಲ್ಲು ತೂರಾಟಕ್ಕೆ ಕಾರಣವಾಗಿತ್ತು. ಈ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು. ತದನಂತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನೆಯನ್ನು ಹತ್ತಿಕ್ಕಲು ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಆಗಮಿಸಿದ್ದರಾದರೂ ಉದ್ರಿಕ್ತರತ್ತ ತೆರಳಲು ಭದ್ರತಾ ಸಿಬ್ಬಂದಿಗಳು ಹಿಂಜರಿದಿದ್ದು, ಕರ್ಫ್ಯೂ ವಿಧಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಅಧಿಕಾರಿಯ ವಿರುದ್ಧ ನ್ಯಾಯದರ್ಶಿ ಮಂಡಳಿಯಿಂದ ವಿಚಾರಣೆ ಆರಂಭಗೊಂಡಿತ್ತು. ಅಲ್ಲದೇ ಸೋಮವಾರವಷ್ಟೇ ವಿಚಾರಣೆ ಕೈಗೊಂಡಿದ್ದ ನ್ಯಾಯಾಧೀಶ ಬಾಬ್ ಮೈಕ್ ಅವರು ನಿನ್ನೆ ತೀರ್ಪು ಪ್ರಕಟಿಸಿದ್ದರು. ಡಾರೆನ್ ವಿಲ್ಸನ್ ಯಾವುದೇ ತಪ್ಪು ಮಾಡಿಲ್ಲ ಆದ ಕಾರಣ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ್ದರು.