ದೇಶ

ಜಾರಿ ತೆಕ್ಕೆಗೆ ಬಿದ್ದ ರು.700 ಕೋಟಿ ಆಸ್ತಿ

ನವದೆಹಲಿ: ಬಹುಕೋಟಿ ಸ್ಪೆಕ್ಟ್ರಂ ಹಗರಣದಲ್ಲಿ ಸಿಕ್ಕಿ ಒದ್ದಾಡುತ್ತಿರುವ ಮಾರನ್ ಸಹೋದರರಿಗೆ ಬುಧವಾರ ಹಿನ್ನಡೆಯಾಗಿದೆ. ಏರ್‍ಸೆಲ್- ಮ್ಯಾಕ್ಸೆಸ್ ಖರೀದಿ ಪ್ರಕರಣದಲ್ಲಿ ಅವ್ಯವಹಾರ ಎಸಗಿದ ಪ್ರಕರಣದಲ್ಲಿ ಮಾಜಿ ಸಚಿವ ದಯಾನಿಧಿ ಮಾರನ್ ಮತ್ತು ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್‍ಗೆ ಸೇರಿದ ರು.742.58 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟು ಗೋಲು ಹಾಕಿಕೊಂಡಿದೆ.

ಈ ಪೈಕಿ ಬ್ಯಾಂಕ್‍ಗಳಲ್ಲಿ ಕಲಾನಿಧಿ ಮಾರನ್ ಹೆಸರಿನಲ್ಲಿ ಇರಿಸಲಾಗಿರುವ ರು.100 ಕೋಟಿ ಠೇವಣಿ ಕೂಡ ಸೇರಿದೆ. ಹವಾಲಾ ಜಾಲದ ಅಡಿ ಮಾರನ್ ಸಹೋದರರ ವಿರುದ್ಧ ಪ್ರಕರಣ ದಾಖಲಾಗಿದೆ.

ಏನೇನು ಮುಟ್ಟುಗೋಲು?
ದಯಾನಿಧಿ ಮಾರನ್‍ಗೆ ಸೇರಿದ ರು.7.47 ಕೋಟಿ ನಿಗದಿತ ಠೇವಣಿ, ಕಲಾನಿಧಿ ಮಾರನ್‍ಗೆ ಸೇರಿದ ರು.2.78 ಕೋಟಿ ಮೌಲ್ಯದ ಮ್ಯೂಚ್ಯುವಲ್ ಫಂಡ್ ಮತ್ತು ಕಲಾನಿಧಿ ಮಾರನ್ ಪತ್ನಿಯ ಹೆಸರಿನಲ್ಲಿದ್ದ ರು.1.78 ಕೋಟಿ ಠೇವಣಿ ಮತ್ತು ರು.1.78 ಕೋಟಿ ಮೌಲ್ಯದ ಮ್ಯುಚ್ಯುವಲ್ ಫಂಡ್ ಅನ್ನು ಮುಟ್ಟು ಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಆರೋಪವೇನು?
ಮಾರನ್ 2004 ಮತ್ತು 2007ರ ಅವಧಿಯಲ್ಲಿ ದೂರಸಂಪರ್ಕ ಸಚಿವರಾಗಿದ್ದಾಗ ಏರ್‍ಸೆಲ್ ಖರೀದಿ ವಿಚಾರ ಪ್ರಸ್ತಾಪ ವಾಗಿತ್ತು. ಸಿಂಗಾಪುರ ಮೂಲದ ಏರ್‍ಸೆಲ್ ಮ್ಯಾಕ್ಸಿಸ್ ಕಂಪನಿಯ ಮಾಲೀಕ ಶಿವಶಂಕರನ್ ಮೇಲೆ ಏರ್‍ಸೆಲ್ ಅನ್ನು ತಮ್ಮ ಸಹೋದರ ಕಲಾನಿಧಿಗೇ ಮಾರು ವಂತೆ ಈ ಬಗ್ಗೆ ಒತ್ತಡ ಹೇರಲಾಗಿತ್ತು ಎಂಬ ಆರೋಪಗಳಿವೆ. ಸಿಬಿಐ ತನಿಖೆ ನಡೆಸಿದ ವೇಳೆ ಏರ್‍ಸೆಲ್ ರು.629 ಕೋಟಿಯನ್ನು ಅಕ್ರಮವಾಗಿ ಸನ್‍ನೆಟ್ ವರ್ಕ್‍ನಲ್ಲಿ ಹೂಡಿಕೆ ಮಾಡಲಾಗಿತ್ತು. ಈ ಪೈಕಿ ರು.100 ಕೋಟಿ ಮೊತ್ತವನ್ನು ಮಾರಿಷಸ್ ಮೂಲಕ ಬಂಡವಾಳ ಹೂಡಿಕೆ ಮಾಡಲಾಗಿತ್ತು.

SCROLL FOR NEXT