ಹಾಟ್ ಯೋಗ ಗುರು ಬಿಕ್ರಮ್ ಚೌಧರಿ ತನ್ನ ವಿರುದ್ಧದ ಅತ್ಯಾಚಾರ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಕೆಲವು ಬಾರಿ ನಾನು ಅವರೊಂದಿಗೆ ಸೆಕ್ಸ್‌ಗೆ ಸಹಕರಿಸದೇ ಇದ್ದರೂ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ತನ್ನ ಹಾಟ್ ಯೋಗದ ಮೂಲಕ ಅಮೆರಿಕದಲ್ಲಿ ಖ್ಯಾತರಾಗಿರುವ ಭಾರತೀಯ ಮೂಲದ 69 ವರ್ಷದ ಬಿಕ್ರಮ್ ಚೌಧರಿ ವಿರುದ್ಧ ಇತ್ತೀಚಿಗೆ ಆರು ಮಹಿಳೆಯರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಬಿಕ್ರಮ್ ಚೌಧರಿ ಭಾರತ ಸೇರಿದಂತೆ ನಾನಾ ಕಡೆ ಅತ್ಯಾಚಾರ ನಡೆಸಿರುವುದಾಗಿ ಮಹಿಳೆಯರು ದೂರಿನಲ್ಲಿ ತಿಳಿಸಿದ್ದಾರೆ.
2013ರಲ್ಲಿ ತನ್ನ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದ ನಂತರ ಇದೇ ಮೊದಲ ಬಾರಿಗೆ ಸಂದರ್ಶನ ನೀಡಿರುವ ಬಿಕ್ರಮ್ ಚೌಧರಿ, 'ನಾನು ಯಾವತ್ತು ಯಾರ ಮೇಲೂ ಹಲ್ಲೆ ನಡೆಸಿಲ್ಲ. ಏಕೆಂದರೆ ಸೆಕ್ಸ್‌ಗಾಗಿ ನನಗೆ ಹಲವು ಆಹ್ವಾನ ಬಂದಿವೆ. ಹೀಗಾಗಿ ನಾನು ಅವರ ಮೇಲೆ ಹಲ್ಲೆ ನಡೆಸುವ ಅಗತ್ಯ ಇಲ್ಲ' ಎಂದಿದ್ದಾರೆ.
ಈಗ ನನ್ನ ವಿರುದ್ಧ ಕೇಸ್ ದಾಖಲಿಸಿರುವ ಆ ಆರು ಮಹಿಳೆಯರ ಮೇಲೂ ನಾನು ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ನಡೆಸಿಲ್ಲ ಎಂದು ಯೋಗ ಗುರು ಹೇಳಿದ್ದಾರೆ. ಆದರೆ ನಿಮ್ಮ ಯೋಗ ವಿದ್ಯಾರ್ಥಿನಿಯರೊಂದಿಗೆ ನೀವು ಯಾವತ್ತು ಸೆಕ್ಸ್ ಮಾಡಿಲ್ಲವೆ? ಎಂಬ ಪ್ರಶ್ನೆಗೆ ಮಾತ್ರ ಹೌದು ಮತ್ತು ಇಲ್ಲ ಎಂದು ಉತ್ತರಿಸಿದ್ದಾರೆ.
'ನನ್ನ ಯಾವುದೇ ಶಿಷ್ಯೆಯರೊಂದಿಗೆ ಅಥವಾ ಮಹಿಳೆಯರೊಂದಿಗೆ ಸೆಕ್ಸ್ ಮಾಡಬೇಕು ಎಂಬ ಉದ್ದೇಶ ನನಗೆ ಇಲ್ಲ. ಆದರೆ ಕೆಲವು ಬಾರಿ ಶಿಷ್ಯೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಸೆಕ್ಸ್‌ಗೆ ಸಹಕರಿಸಲಿಲ್ಲ ಎಂಬ ಕಾರಣಕ್ಕೆ ನನ್ನ ಹಲವು ಶಿಷ್ಯೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಬಿಕ್ರಮ್ ಸಿಂಗ್ ಹೇಳಿದ್ದಾರೆ.