ಕೌಲಾಲಂಪುರ್: ದೇಶಾದಾದ್ಯಂತ ಉಗ್ರರ ಕಾರ್ಯ ಚಟುವಟಿಕೆಗಳು ಹೆಚ್ಚುತ್ತಿದ್ದು, ಮಲೇಷ್ಯಾದಲ್ಲಿ 17 ಮಂದಿ ಶಂಕಿತ ಉಗ್ರರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಕೌಲಾಲಂಪುರ ಪ್ರದೇಶದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ 15 ಮಂದಿ ಹಾಗೂ ಸಿರಿಯಾದಿಂದ ಬಂದಿದ್ದ ಇಬ್ಬರು ವ್ಯಕ್ತಿಗಳು ಸೇರಿ ಒಟ್ಟು 17 ಮಂದಿಯನ್ನು ಮಲೇಷ್ಯಾ ಉಗ್ರ ನಿಗ್ರಹ ಕಾರ್ಯಾಚರಣೆ ತಂಡ ಬಂಧಿಸಿದೆ.
ಮಲೇಷ್ಯಾದಿಂದ ಸಿರಿಯಾಗೆ ಈಗಾಗಲೇ ಸುಮಾರು 67 ಕ್ಕೂ ಹೆಚ್ಚು ತಲುಪಿದ್ದು, ಇವರಲ್ಲಿ ಗುಂಪು ಘರ್ಷಣೆಯಿಂದಾಗಿ 5 ಮಂದಿ ಸಾವನ್ನಪ್ಪಿದ್ದಾರೆ. ಜನವರಿ ಒಂದು ತಿಂಗಳಲ್ಲೇ ಸಿರಿಯಾದಿಂದ ಮಲೇಷ್ಯಾಗೆ ಬಂದ ಸುಮಾರು 120 ಮಂದಿ ಶಂಕಿತ ಉಗ್ರರನ್ನು ಉಗ್ರ ನಿಗ್ರಹ ತಂಡ ಬಂಧಿಸಿತ್ತು. ಇದೀಗ ಮತ್ತೆ 17 ಮಂದಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಶಂಕಿತ ಉಗ್ರರ ಕುರಿತಂತೆ ಈ ವರೆಗೂ ಯಾವುದೇ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ ತನಿಖೆ ಮುಂದುವರೆದಿದೆ ಎಂದು ಮಲೇಷ್ಯಾ ರಾಷ್ಟ್ರೀಯ ಪೊಲೀಸ್ ಆಯುಕ್ತ ಖಲಿದ್ ಅಬುಬಕರ್ ತಮ್ಮ ಟ್ವೀಟ್ ಮಾಡಿದ್ದಾರೆ.
ಉಗ್ರರ ಕಾರ್ಯ ಚಟುವಟಿಕೆಗಳು ದೇಶಾದ್ಯಂತ ಹೆಚ್ಚುತ್ತಿದ್ದು, ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಈಗಾಗಲೇ ಮಲೇಷ್ಯಾದಾದ್ಯಂತ ತೀವ್ರ ರೀತಿಯ ಕಟ್ಟೆಚ್ಚರ ವಹಿಸಲಾಗಿದೆ. ಹೊಸ ಭಯೋತ್ಪಾದನಾ ನೀತಿಯನ್ನು ಜಾರಿಗೆ ತರಲಾಗಿದೆ. ಜಾರಿಯಾಗಿರುವ ಹೊಸ ನೀತಿಯಲ್ಲಿ ಬಂಧನಕ್ಕೊಳಪಟ್ಟ ಶಂಕಿತ ಉಗ್ರನನ್ನು ಅನಿಯಮಿತ ಕಾಲದವರೆಗೆ ವಿಚಾರಣೆ ನಡೆಸುವ ಅನುಮತಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಖಲಿದ್ ಅಬುಬಕರ್ ಹೇಳಿದ್ದಾರೆ.