ವಾಷಿಂಗ್‌ಟನ್: ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿದ ಹಾಗೂ ದಾಳಿಗಳಿಗೆ ಹಣಕಾಸು ನೆರವು ನೀಡಿದ ಕಾರಣ ಪಾಕಿಸ್ತಾನ ತಾಲಿಬಾನ್ ಮುಖ್ಯಸ್ಥ ಮುಲ್ಲಾ ಫಜ್ಲುಲ್ಲಾ ಅಲಿಯಾಸ್ ರೇಡಿಯೋ ಮುಲ್ಲಾ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಿಷೇಧ ಹೇರಿದೆ.
2014ರಲ್ಲಿ ಪಾಕಿಸ್ತಾನದ ಪೇಶಾವರ ಶಾಲೆಯ ಮೇಲೆ ನಡೆದ ಉಗ್ರದಾಳಿಯ ಪ್ರಮುಖ ಮಾಸ್ಟರ್ ಮೈಂಡ್ ಎನಿಸಿಕೊಂಡಿರುವ ಮುಲ್ಲಾ ಫಜ್ಲುಲ್ಲಾ ಮೇಲೆ ನೂರಾರು ಭಯೋತ್ಪಾದಕ ದಾಳಿಗಳನ್ನು ನಡೆಸಿರುವ ಮತ್ತು ಅಂತಹ ಅಮಾನವೀಯ ದಾಳಿಗಳಿಗೆ ಹಣಕಾಸು ನೆರವನ್ನು ಒದಗಿಸಿರುವ ಕಾರಣಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಆತನ ಮೇಲೆ ನಿಷೇಧ ಹೇರಿದೆ. ಉಗ್ರ ಸಂಘಟನೆ ಅಲ್ ಖೈದಾ ವಿರುದ್ಧದ ಭದ್ರತಾ ಮಂಡಳಿಯ ನಿಷೇಧ ಪಟ್ಟಿಗೆ 40 ವರ್ಷದ ಮುಲ್ಲಾ ಫಜ್ಲುಲ್ಲಾನನ್ನು ಸೇರಿಸಲಾಗಿದ್ದು, ಆತನ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಷ್ಟೇ ಅಲ್ಲದೇ ಆತನ ಮೇಲೆ ಪ್ರಯಾಣ ನಿಷೇಧ ಹಾಗೂ ಶಸ್ತ್ರಾಸ್ತ್ರ ಸಾಗಾಟ ನಿರ್ಬಂಧಗಳನ್ನು ಹೇರಲಾಗುವುದು ಎಂದು ವಿಶ್ವಸಂಸ್ಥೆ ಮೂಲಗಳು ತಿಳಿಸಿವೆ.
ಪಾಕಿಸ್ತಾನ ಸ್ವಾತ್ ಕಣಿವೆಯಲ್ಲಿ 2013ರ ನವೆಂಬರ್ ನಲ್ಲಿ ಅಮೆರಿಕದ ಚಾಲಕ ರಹಿತ ಯುದ್ಧ ವಿಮಾನ ಡ್ರೋನ್ ದಾಳಿ ಅಂದಿನ ತಾಲಿಬಾನ್ ಮುಖ್ಯಸ್ಥನಾಗಿದ್ದ ಹಕೀಮುಲ್ಲಾ ಸಾವನ್ನಪ್ಪಿದ್ದ. ಆತನ ಮರಣಾನಂತರ ತಾಲಿಬಾನ್ ಮುಖ್ಯಸ್ಥ ಸ್ಥಾನಕ್ಕೇರಿದ ಫಜ್ಲುಲ್ಲಾ ತೆಹರೀಕ್ ಎ ತಾಲಿಬಾನ್ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದು, ಆತನಿಗೆ ರೇಡಿಯೋ ಮುಲ್ಲಾ ಎಂಬ ಅಡ್ಡ ಹೆಸರು ಕೂಡ ಇದೆ.
ಪಾಕಿಸ್ತಾನದ ಪ್ರಕ್ಷುಬ್ದ ಖೈಬರ್ ಬುಡಕಟ್ಟು ಪ್ರಾಂತ್ಯದಲ್ಲಿ ಕಳೆದ ತಿಂಗಳಲ್ಲಿ ನಡೆಸಲಾಗಿದ್ದ ವೈಮಾನಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಫಜ್ಲುಲ್ಲಾ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆಯಾದರೂ,ಅದು ಈ ವರೆಗೂ ದೃಢಪಟ್ಟಿಲ್ಲ. ತಾಲಿಬಾನ್ ಸಂಸ್ಥೆ ಕೂಡ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.