ನವದೆಹಲಿ: ನನ್ನ ವಿರುದ್ಧ ಮಾಧ್ಯಮಗಳು ವಾಗ್ದಾಳಿ ನಡೆಸಲು ಮೂಲ ಕಾರಣ ಶಸ್ತ್ರಾಸ್ತ್ರ ಲಾಬಿ ಎಂದು ಕೇಂದ್ರ ಸಚಿವ ವಿ.ಕೆ.ಸಿಂಗ್ ಭಾನುವಾರ ಆರೋಪಿಸಿದ್ದಾರೆ.
ಸೇನಾ ಮುಖ್ಯಸ್ಥನಾಗಿದ್ದ ಸಂದರ್ಭದಲ್ಲಿ ನನ್ನನ್ನು ಮಣಿಸಲು ಶಸ್ತ್ರಾಸ್ತ್ರ ಲಾಬಿಗಳಿಗೆ ಸಾಧ್ಯವಾಗಲಿಲ್ಲ. ಹಾಗಾಗಿ, ಈಗ ಅರು ತಮ್ಮ ವಿರುದ್ಧ ಕತ್ತಿ ಮಸಿಯುವ ಪ್ರಯತ್ನ ಮುಂದುವರೆಸಿದ್ದಾರೆ. ನನ್ನ ವಿರುದ್ಧ ನಡೆಸಲಾಗುತ್ತಿರುವ ಸಂಚಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಮಾಹಿತಿ ನೀಡಿದ್ದೇನೆ ಎಂದು ಸಿಂಗ್ ತಿಳಿಸಿದ್ದಾರೆ.
ನನ್ನ ವಿರುದ್ಧ ಸಂಚು ನಡೆಸುತ್ತಿರುವವರಲ್ಲಿ ಮಾಜಿ ಸೇನಾಧಿಕಾರಿ ಭಾಗಿಯಾಗಿದ್ದಾರೆ. ಹಲವು ಸಂಸ್ಥೆಗಳೊಂದಿಗೆ ಅವರು ಹೊಂದಿರುವ ಸಂಬಂಧದ ಬಗ್ಗೆ ಹೇಳಲು ಇಚ್ಚಿಸುವುದಿಲ್ಲ. ಆದರೆ, ಅವರು ಸಾಕಷ್ಟು ಮಂದಿಯಿಂದ ಅವರು ಹಣ ಪಡೆದಿದ್ದಾರೆ. ಕೆಲವು ಪತ್ರಕರ್ತರು ಹಾಗೂ ಇತರರು ಅವರು ಹೇಳಿದ್ದನ್ನು ಬರೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಇಂದಿಗೂ ಶಸ್ತ್ರಾಸ್ತ್ರ ಲಾಬಿ ನಿಮ್ಮ ವಿರುದ್ಧ ಪಿತೂರಿ ನಡೆಸಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಲೂ ಶಸ್ತ್ರಾಸ್ತ್ರ ಲಾಬಿ ನನ್ನ ವಿರುದ್ಧ ಸಂಚು ರೂಪಿಸುತ್ತಿವೆ. ಚುನಾವಣೆ ಸಮಯದಲ್ಲೂ ಸಾಕಷ್ಟು ಸಂಚು ನಡೆಸಿದ್ದರು. ಈಗಲೂ ನನ್ನನ್ನು ಸ್ಥಾನದಿಂದ ಕೆಳಗಿಳಿಸುವುದೊಂದೇ ಅವರ ಗುರಿಯಾಗಿದೆ ಎಂದು ದೂರಿದ್ದಾರೆ.