ದೇಶ

ಕುಟುಂಬ ಯೋಜನೆ ಮಾಡದ ಜನರಿಗೆ ಮತದಾನ ಹಕ್ಕು ನೀಡಬಾರದು: ಸಾಕ್ಷಿ ಮಹಾರಾಜ್

ನವದೆಹಲಿ: ಕುಟುಂಬ ಯೋಜನೆ ಮಾಡದಿರುವ ಜನರಿಗೆ ಮತದಾನ ಹಕ್ಕನ್ನು ಸರ್ಕಾರ  ನೀಡಬಾರದು. ಭಾರತದಲ್ಲಿ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಬೇಕಿದ್ದರೆ ಮೊದಲು ಕುಟುಂಬ  ಯೋಜನೆ ಕುರಿತಂತೆ ಕಠಿಣ ಕಾಯ್ದೆಯನ್ನು ಹೊರ ತರಬೇಕಿದೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಸೋಮವಾರ ಹೇಳಿದ್ದಾರೆ.

ಹಿಂದೂ ಹೆಣ್ಣು ಮಕ್ಕಳು ಕನಿಷ್ಠ ಎಂದರೂ ನಾಲ್ಕು ಮಕ್ಕಳನ್ನು ಹೆರಬೇಕು, ಗಾಂಧಿ ಕೊಂದ  ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ದೇಶಾದ್ಯಂತ ತೀವ್ರ  ವಿರೋಧಕ್ಕೆ ಕಾರಣರಾಗಿದ್ದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಇದೀಗ ಮತ್ತೊಂದು  ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಗೆ ಬಂದಿದ್ದು, ಕುಟುಂಬ ಯೋಜನೆ  ಮಾಡಿದಿರುವ ಜನರಿಗೆ ಮತದಾನ ಹಕ್ಕನ್ನು ನೀಡಬಾರದು ಎಂದು ಹೇಳುವ ಮೂಲಕ ಹೊಸ  ವಿವಾದವನ್ನು ಸೃಷ್ಟಿಸಿದ್ದಾರೆ.

ಮುಸ್ಲಿಮರಿಗೆ ಮತದಾನ ಹಕ್ಕನ್ನು ನೀಡಬಾರದು ಎಂಬ ಶಿವಸೇನೆ ನಾಯಕ ಎಂ.ಪಿ ಸಂಜಯ್ ರಾವತ್ ಅವರ ಹೇಳಿಕೆ ಕುರಿತಂತೆ ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, ಮಕ್ಕಳು ಹೆಚ್ಚಾಗುತ್ತದೆ ಎಂದು ಹಿಂದೂ ಮಹಿಳೆಯರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಆದರೆ ಮುಸ್ಲಿಂ ಸಮುದಾಯದಲ್ಲಿ ಇದಕ್ಕೆ ತದ್ವಿರುದ್ಧ ನಿಯಮ ಇದೆ. ಹಾಗೆಂದು ಕ್ರಿಶ್ಚಿಯನ್ನರು ಸಂತಾನ ಮಾಡಿಸಿಕೊಳ್ಳಲೇಬೇಕು ಎಂದು ನಾನು ಹೇಳುತ್ತಿಲ್ಲ. ಕುಟುಂಬ ಯೋಜನೆ ಕುರಿತಂತೆ ಎಲ್ಲರಿಗೂ ಸಮಾನ ರೀತಿಯ ಕಾನೂನನ್ನು ಜಾರಿಗೆಯಾಗಬೇಕಿದೆ.

ನಾವು ನಾಲ್ಕು ಮಕ್ಕಳನ್ನು ಹೆರಬೇಕು ಎಂದು ಹೇಳಿದರೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತದೆ. ಮುಸ್ಲಿಂ ಪುರುಷರು ನಾಲ್ವರು ಮಹಿಳೆಯರನ್ನು ಮದುವೆಯಾಗಿ 40 ಮಕ್ಕಳನ್ನು ಮಾಡುತ್ತಾರೆ. ಆದರೆ, ಈ ಬಗ್ಗೆ ಯಾರೊಬ್ಬರೂ ಮಾತನಾಡುವುದಿಲ್ಲ. ದೇಶ ಸ್ವತಂತ್ರವಾಗಿ ಮುನ್ನಡೆಯುತ್ತಿದ್ದ ಸಂದರ್ಭದಲ್ಲಿ ದೇಶದಲ್ಲಿ 30 ಕೋಟಿ ಜನರಿದ್ದರು.

ಇದೇ ಜನಸಂಖ್ಯೆ ಇದೀಗ 130 ಕೋಟಿಗೇರಿದೆ. ಇದಕ್ಕೆ ಯಾರು ಹೊಣೆ. ಯಾವುದೇ ಧರ್ಮ ಅಥವಾ ಸಮುದಾಯವಾಗಲೀ ಎಲ್ಲರಿಗೂ ಒಂದೇ ರೀತಿಯ ಕಾನೂನು ಜಾರಿಯಾಗಬೇಕಿದೆ. ಅದು 1,2,3 ಅಥವಾ 4 ಮಕ್ಕಳಾಗಲೀ ಎಲ್ಲರಿಗೂ ಒಂದೇ ರೀತಿಯ ಕಾನೂನು ಜಾರಿಯಾಗಬೇಕು. ಇದರಿಂದ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ಕುರಿತಂತೆ  ಸರ್ಕಾರ ಹಾಗೂ ಪ್ರತಿಪಕ್ಷಗಳು ಕುಳಿತು ಒಮ್ಮತದಿಂದ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.

SCROLL FOR NEXT