ಇಸ್ಲಾಮಾಬಾದ್: ಎರಡು ತಿಂಗಳಲ್ಲಿ 2008ರ ಮುಂಬೈ ದಾಳಿ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ ಎಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಇಸ್ಲಾಮಾಬಾದ್ ಹೈಕೋರ್ಟ್ ಸೋಮವಾರ ಸೂಚಿಸಿದೆ.
ದಾಳಿಯ ಪ್ರಮುಖ ರುವಾರಿ ಝಕಿಉರ್ ರೆಹಮಾನ್ ಲಖ್ವಿ ಜಾಮೀನು ರದ್ದುಪಡಿಸುವಂತೆ ಪಾಕಿಸ್ತಾನ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ನೂರುಲ್ ಹಕ್ ಖುರೇಶಿ ಅವರ ನೇತೃತ್ವದ ಪೀಠ ವಿಚಾರಣೆ ನಡೆಸಿತು. ವಾದ ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ಪ್ರಕರಣದ ವಿಚಾರಣೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಸೂಚನೆ ನೀಡಿದೆ.
ಎರಡು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳ್ಳದಿದ್ದರೆ, ಪ್ರತಿವಾದಿ ವಕೀಲರು ತಂತ್ರ ಹೂಡಿದ್ದರೆ, ಲಖ್ವಿ ಜಾಮೀನನ್ನು ರದ್ದುಗೊಳಿಸಲಾಗುವುದು ಎಂದು ನ್ಯಾಯಾಪೀಠ ಎಚ್ಚರಿಸಿದೆ.
2008ರಲ್ಲಿ ನಡೆದ ಮುಂಬೈ ದಾಳಿಯಲ್ಲಿ 166 ಜನರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಲಖ್ವಿ ಹಾಗೂ ಇತರ ಆರು ಮಂದಿ- ಅಬ್ದುಲ್ ವಾಜೀದ್ಮ, ಮಜರ್ ಇಕ್ಬಾಲ್, ಹಮದ್ ಅಮಿನ್ ಸಾದಿಕ್, ಶಾಹೀದ್ ಜಮೀಲ್ ರಿಯಾಜ್, ಜಮೀಲ್ ಅಹ್ಮದ್ ಹಾಗು ಯೂನಿಸ್ ಅಂಜುಮ್ – ದಾಳಿ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ.
55 ವರ್ಷದ ಲಖ್ವಿ, ಲಾಹೋರ್ ಹೈಕೋರ್ಟ್ ಆದೇಶದ ಮೇರೆಗೆ ರಾವಲ್ಪಿಂಡಿಯ ಅದಿಯಾಲ ಜೈಲಿನಿಂದ ಇದೇ 10ರಂದು ಬಿಡುಗಡೆಯಾಗಿದ್ದನು.