ದೇಶ

ಒಂದಾದ ಜನತಾ ಪರಿವಾರದ ಹೊಸ ಹೆಸರು 'ಸಮಾಜವಾದಿ ಜನತಾ ಪಕ್ಷ'

Lingaraj Badiger

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಮೂಗುದಾರ ಹಾಕಲು ಮುಂದಾಗಿ ಜನತಾ ಪರಿವಾರ ಕಡೆಗೂ ಒಂದಾಗಿದ್ದು, ಆರು ಪಕ್ಷಗಳ ವಿಲೀನದಿಂದ ಹುಟ್ಟಿಕೊಂಡ ಹೊಸ ಪಕ್ಷಕ್ಕೆ 'ಸಮಾಜವಾದಿ ಜನತಾ ಪಕ್ಷ' ಎಂದು ಹೆಸರಿಡಲು ನಿರ್ಧರಿಸಲಾಗಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ, ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವಗೌಡ ಅವರ ಜೆಡಿಎಸ್ ಹಾಗೂ ಓಂ ಪ್ರಕಾಶ್ ಚೌತಾಲ ಅವರ ಇಂಡಿಯನ್ ನ್ಯಾಷಿನಲ್ ಲೋಕದಳ(ಐಎನ್‌ಎಲ್‌ಡಿ) ಸೇರಿದಂತೆ ಆರು ಪಕ್ಷಗಳನ್ನೊಳಗೊಂಡ ಜನತಾ ಪರಿವಾರಕ್ಕೆ ಸಮಾಜವಾದಿ ಜನತಾ ಪಕ್ಷ ಎಂದು ನಾಮಕರಣ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಬುಧವಾರ ವರದಿಗಳು ತಿಳಿಸಿವೆ.

ಈ ನೂತನ ತೃತೀಯ ರಂಗಕ್ಕೆ ಮುಲಾಯಂ ಸಿಂಗ್ ಯಾದವ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಮತ್ತು ಸಮಾಜವಾದಿ ಪಕ್ಷದ ಚಿಹ್ನೆ ಸೈಕಲ್‌ನ್ನೇ ಸಮಾಜವಾದಿ ಜನತಾ ಪಕ್ಷದ ಚಿಹ್ನೆಯನ್ನಾಗಿ ಸ್ವೀಕರಿಸಲು ಆರು ಪಕ್ಷಗಳು ನಿರ್ಧರಿಸಿವೆ.

ವರದಿಗಳ ಪ್ರಕಾರ, ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರೇ ಈ ನೂತನ ರಾಜಕೀಯ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ.

ಮುಲಾಯಂ ಸಿಂಗ್ ಯಾದವ್ ಅವರು ಲೋಕಸಭೆ ತೃತೀಯ ರಂಗವನ್ನು ಮುನ್ನಡೆಸಲಿದ್ದು, ರಾಜ್ಯಸಭೆಯಲ್ಲಿ ಶರದ್ ಯಾದವ್ ಅವರು ನೂತನ ಪಕ್ಷದ ಸಾರಥಿಯಾಗಲಿದ್ದಾರೆ.

SCROLL FOR NEXT