ಹರಿದ್ವಾರ: ಹರಿದ್ವಾರದ ಹರ್ ಕಿ ಪೌರಿ, ಗಂಗಾನದಿ ಸೇರಿದಂತೆ ಇನ್ನಿತರೆ ಪವಿತ್ರ ಸ್ಥಾನಗಳಿಗೆ ಹೋಗಲು ಹಿಂದುಗಳಲ್ಲದ ಜನರಿಗೆ ಅವಕಾಶ ನೀಡಬಾರದು ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಮಂಗಳವಾರ ಹೇಳಿದ್ದಾರೆ.
ಈ ಕುರಿತಂತೆ ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಯೋಗಿ ಆದಿತ್ಯನಾಥ್, ಹಿಂದುಗಳನ್ನು ಬಿಟ್ಟು ಇನ್ಯಾವುದೇ ಧರ್ಮದ ಜನರನ್ನು ಹರಿದ್ವಾರದ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವನ್ನು ರದ್ದು ಮಾಡಬೇಕು. ಇದಕ್ಕೆ ಪ್ರಮುಖ ಕಾರಣ ಭದ್ರತೆ ಹಾಗೂ ಪಾವಿತ್ರ್ಯತೆ ಎಂದು ಹೇಳಿದ್ದಾರೆ.
ಶಿವಸೇನೆ ಮುಖಪುಟ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಶಿವಸೇನೆ ನಾಯಕ ಎಂಪಿ ಸಂಜಯ್ ರಾವತ್ ಅವರು ನೀಡಿದ್ದ ವೋಟ್ ಬ್ಯಾಂಕ್ ರಾಜಕಾರಣ ತಡೆಯಲು ಮುಸ್ಲಿಮರ ಮತ ಹಕ್ಕನ್ನು ರದ್ದುಗೊಳಿಸಿ ಬೇಕು ಎಂಬ ಹೇಳಿಕೆ ಹಿನ್ನೆಲೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಯೋಗಿ ಆದಿತ್ಯನಾಥ್, ಮುಸ್ಲಿಮರಿಂದ ಪಾವಿತ್ರ್ಯ ಸ್ಥಳಗಳಿಗೆ ಅಪಾಯವಿದೆ. ಹಾಗಾಗಿ ನಮ್ಮ ಪವಿತ್ರ ಸ್ಥಳಗಳನ್ನು ಉಳಿಸಿಕೊಳ್ಳಬೇಕಾದರೆ ಈ ನಿಯಮವನ್ನು ಜಾರಿಗೆ ತರಬೇಕು. ಈ ನಿಯಮವನ್ನು ಅನುಷ್ಠಾನಕ್ಕೆ ತರಲು ಹಿಂದುಪರ ಸಂಘಟನೆಗಳು ಹಾಗೂ ಸಂತರು ಮುಂದೆ ಬರಬೇಕಿದೆ ಎಂದು ಹೇಳಿದ್ದಾರೆ.
ಯೋಗಿಆದಿತ್ಯನಾಥ್ ಅವರ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಿಶೋರ್ ಉಪಾಧ್ಯಾಯ ಅವರು, ಹಿಂದುಗಳಲ್ಲದ ಜನರು ಪವಿತ್ರ ಸ್ಥಳಗಳಿಗೆ ಅಪಾಯವಾದರೆ ಯೋಗಿ ಆದಿನಾಥ್ ಅವರು ಕೂಡ ಭಾರತಕ್ಕೆ ಪಾಕಿಸ್ತಾನಕ್ಕಿಂತ ದೊಡ್ಡ ಅಪಾಯದ ವ್ಯಕ್ತಿ. ಯೋಗಿ ಆದಿತ್ಯನಾಥ್ ಅವರ ಈ ರೀತಿಯ ಹೇಳಿಕೆಯು ದೇವಭೂಮಿಗೆ ಅವಮಾನ ಮಾಡಿದೆ. ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಯೋಗಿ ಆದಿತ್ಯನಾಥ್ ಕ್ಷಮೆಯಾಚಿಸಬೇಕೆಂದು ಉಪಾಧ್ಯಾಯ ಆಗ್ರಹಿಸಿದ್ದಾರೆ.