ನವದೆಹಲಿ: ಹಿರಿತಲೆಗಳ ಬೇಕು, ಬೇಡಗಳ ನಡುವೆ, ಕಾಂಗ್ರೆಸ್‍ನ `ಮೊದಲ ಕುಟುಂಬ'ದ ಅಮ್ಮ - ಮಗನ ಜಗಳ ತಾರಕಕ್ಕೇರುತ್ತಿದೆಯೇ? ಹೌದು ಎನ್ನುತ್ತಿವೆ ಮೂಲಗಳು. ವಿಚಿತ್ರವೆಂದರೆ ರಾಹುಲ್ ಗಾಂಧಿ ವಿರುದ್ಧ ಧ್ವನಿ ಎತ್ತಿರುವವರೆಲ್ಲರೂ ಸೋನಿಯಾ ಗಾಂಧಿ ಅವರ ನಿಷ್ಠರೇ.
ಶೀಲಾ ದಿಕ್ಷೀತ್ ಅವರಿಂದ ಹಿಡಿದು, ಕ್ಯಾ. ಅಮರೀಂದರ್ ಸಿಂಗ್, ಮಾಜಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ಅಂಬಿಕಾ ಸೋನಿ, ಸಂದೀಪ್ ದೀಕ್ಷಿತ್ ಎಲ್ಲರೂ ಸೋನಿಯಾ ಪರಮಾಪ್ತರು. ಆದರೆ ರಾಹುಲ್ ಗಾಂಧಿ ಮುನಿಸಿಕೊಂಡು ಹೋಗಿರುವುದೇ ಈ ಎಲ್ಲ ಹಿರಿ ತಲೆಗಳನ್ನು ತೆಗೆಯಬೇಕು ಎಂಬ ಪಟ್ಟು ಹಿಡಿದು. ಹೀಗಾಗಿ ಇದು ಅಮ್ಮ - ಮಗನ ನಡುವಿನ ಜಗಳವೆಂದೇ ವಿಶ್ಲೇಷಿಸಲಾಗುತ್ತಿದೆ.
ಇಷ್ಟೆಲ್ಲ ಆಗುತ್ತಿದ್ದರೂ, ರಾಹುಲ್ ಸಮರ್ಥಿಸಿಕೊಳ್ಳುತ್ತಿರುವವರು ದಿಗ್ವಿಜಯ ಸಿಂಗ್ ಮಾತ್ರ. ಇವರು ರಾಹುಲ್ ಪಾಳೆಯದವರು ಎಂಬುದು ಮೊದಲಿಂದಲೂ ಗೊತ್ತಿರುವ ಸಂಗತಿ. ಉಳಿದೆಲ್ಲರೂ ರಾಹುಲ್ ನಾಯಕತ್ವ ವಹಿಸಿಕೊಳ್ಳುವುದು ಬೇಡ, ಸೋನಿಯಾ ಅವರೇ ಇರಲಿ ಎಂಬ ವಾದ ದಿನಂಪ್ರತಿ ಏಳುತ್ತಿದೆ.
ಶೀಲಾ ದೀಕ್ಷಿತ್ ಹೇಳಿದ್ದು
* ಪಕ್ಷದಲ್ಲಿ ಮುಂದೇನಾಗಲಿದೆ, ಏನಾಗಬಾರದು ಎನ್ನುವ ಕುರಿತು ಹೇಳಲು ಸಾಧ್ಯವಿಲ್ಲ. ರಾಹುಲ್ ಯಶಸ್ವಿಯಾಗಬೇಕು. ಆದರೆ, ಪಕ್ಷದಲ್ಲಿ ಸೋನಿಯಾ ಅವರ ಯಶಸ್ವಿ ಹಾಗೂ ಪ್ರಭಾವಶಾಲಿ ನಾಯಕತ್ವವಿದೆ. ಅವರ ನಾಯಕತ್ವದಲ್ಲಿ ತೃಪ್ತಿಕರ ಭಾವನೆ ಇರುತ್ತದೆ.
* ಸೋನಿಯಾ ಗಾಂಧಿ ಅವರ ನಾಯಕತ್ವದ ಕುರಿತು ಟೀಕೆ ಮಾಡುವ ಯಾವುದೇ ವ್ಯಕ್ತಿಯನ್ನು ನಾನು ಈವರೆಗೆ ನೋಡಿಲ್ಲ. ಇದನ್ನು ನಾನು ಸಂಪೂರ್ಣ ಆತ್ಮವಿಶ್ವಾಸದಿಂದ ಹೇಳ ಬಲ್ಲೆ. ರಾಹುಲ್ ನಾಯಕತ್ವದ ವಿಚಾರದಲ್ಲಿ ಪ್ರಶ್ನಾರ್ಥಕ ಚಿಹ್ನೆ ಇದೆ. ಅನುಮಾನ ಇದೆ. ಇದಕ್ಕೆ ಆತನ ನಾಯಕತ್ವವನ್ನು ನೀವು ನೋಡದೇ ಇರುವುದೇ ಕಾರಣ.
* ಆತನಿಗೆ ಈವರೆಗೆ ನಾಯಕತ್ವದ ಅವಕಾಶ ಸಿಕ್ಕಿಲ್ಲ. ಯಾವ ಜವಾಬ್ದಾರಿಯೂ ಸಿಕ್ಕಿಲ್ಲ. ಹಾಗಾಗಿ ಆತನ ಕುರಿತು ತೀರ್ಮಾನವೊಂದಕ್ಕೆ ಬರುವುದು ಅಥವಾ ಟೀಕೆ ಮಾಡುವುದು ನ್ಯಾಯ ಸಮ್ಮತ ಎಂದು ನನಗನಿಸುತ್ತಿಲ್ಲ. ನಾವು ಅದಕ್ಕಾಗಿ ಕಾದು ನೋಡಬೇಕು.
* ಸೋನಿಯಾ ಗಾಂಧಿ ನಾಯಕತ್ವದಲ್ಲಿ ಪಕ್ಷದೊಳಗೆ ಒಂದು ತೃಪ್ತಿಕರ ಭಾವನೆ ಇದೆ. ಯಾಕೆಂದರೆ ಆಕೆ ನಿರೀಕ್ಷಿಸದೇ ಇದ್ದದ್ದನ್ನು ಮಾಡಿದ್ದಾರೆ. ಆಕೆ ಪ್ರಧಾನಿ ಹುದ್ದೆಯನ್ನು ಒಪ್ಪಿಕೊಳ್ಳಲಿಲ್ಲ. ಆಕೆಯ ನಾಯಕತ್ವದಲ್ಲಿ ಕಾಂಗ್ರೆಸ್ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದೆ. ಆಕೆಯ ನಾಯಕತ್ವದ ಮೇಲೆ ಪಕ್ಷ ವಿಶ್ವಾಸ ಇರಿಸಿಕೊಳ್ಳಬಹುದು. ಆದರೆ, ರಾಹುಲ್ ವಿಚಾರದಲ್ಲಿ ಈ ತೃಪ್ತಿಕರ ಭಾವನೆ ಇನ್ನಷ್ಟೇ ಸೃಷ್ಟಿಯಾಗಬೇಕಿದೆ.
* ಸೋನಿಯಾ ಅವರು ಜವಾಬ್ದಾರಿಯಿಂದ ನುಣುಚಿಕೊಳ್ಳುವ ವ್ಯಕ್ತಿಗಳ ಸಾಲಿಗೆ ಸೇರಲ್ಲ. ಪಕ್ಷದ ನಾಯಕತ್ವದಿಂದ ಇಳಿಯುವ ನಿರ್ಧಾವನ್ನು ಸೋನಿಯಾ ಅವರೇ
ತೆಗೆದುಕೊಳ್ಳಬೇಕು. ಆದರೆ, ಕಾಂಗ್ರೆಸ್, ಅದರ ತತ್ವಸಿದ್ಧಾಂತ ಅಸ್ತಿತ್ವದ ಪ್ರಶ್ನೆ ಬಂದಾಗ ಸೋನಿಯಾ ಅವರು ಯಾವತ್ತೂ ನೆರವಿಗೆ ಧಾವಿಸುತ್ತಾರೆ.
* ರಾಹುಲ್ ಅಧ್ಯಕ್ಷರಾದರೆ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲರೇ ಎನ್ನುವುದು ಭವಿಷ್ಯದ ಪ್ರಶ್ನೆ. ಇದು ಹೇಗೆ ಕೆಲಸ ಮಾಡುತ್ತಾರೆ? ಯಾವ ರೀತಿ ಕೆಲಸ ಮಾಡುತ್ತಾರೆ
ಎನ್ನುವುದನ್ನು ಆಧರಿಸಿರುತ್ತದೆ. ಒಮ್ಮೆ ಸಂಪೂರ್ಣ ಜವಾಬ್ದಾರಿ ಸಿಕ್ಕಾಗ ಬೇರೇಯೇ ರೀತಿ ಕೆಲಸ ಮಾಡಬಹುದು.
ಗಂಭೀರವಾಗಿ ಪರಿಗಣಿಸಿ- ಡಿಗ್ಗಿ: ರಾಹುಲ್‍ಗಾಂಧಿ ಅವರ ಸುದೀರ್ಘ ರಜೆ ಪಕ್ಷದ ಹಿರಿಯ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿಯೇ ರಾಹುಲ್ ಕಟ್ಟಾ ಬೆಂಬಲಿಗರಾದ ದಿಗ್ವಿಜಯ್ ಸಿಂಗ್ ರಾಜಕೀಯವನ್ನು ಪಾರ್ಟ್ ಟೈಂ ಜಾಬ್ ಎಂದು ಕೊಳ್ಳಬೇಡಿ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದ್ದಾರೆ.
ಹಾಗೆ ಹೇಳಿಲ್ಲ: ರಾಹುಲ್ ನಾಯಕತ್ವ ಪ್ರಶ್ನಿಸಿ ಶೀಲಾ ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಶೀಲಾ ಅವರು, ತಾವು ಹಾಗೆ ಹೇಳಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಅವರು ಟೀವಿ ವಾಹಿನಿಗಳಿಗೂ ಆ ರೀತಿ ಸುದ್ದಿ ಪ್ರಸಾರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಇದೇ ಮೊದಲೇನಲ್ಲ
ಈ ಹಿಂದೆ ರಾಜ್ಯಸಭಾ ಸದಸ್ಯೆ ಜಯಂತಿ ನಟರಾಜನ್ ಕೂಡ ಸೋನಿಯಾ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಲಿ ಎನ್ನುವ ಭಾವನೆ ವ್ಯಕ್ತಪಡಿಸಿದ್ದರು. ನಂತರ ಕರ್ನಾಟಕದ ಮಾಜಿ ರಾಜ್ಯಪಾಲ ಭಾರದ್ವಾಜ್, ಹಿರಿಯ ಮುಖಂಡ ಕ್ಯಾಪ್ಟನ್ ಅಮ ರೀಂದರ್ ಸಿಂಗ್ ಕೂಡ ರಾಹುಲ್ ನಾಯಕತ್ವಕ್ಕೆ ಅಪಸ್ವರ ಎತ್ತಿದ್ದರು. ಇದಕ್ಕೂ ಮೊದಲು ಸಂದೀಪ್ ದೀಕ್ಷಿತ್ ಕೂಡ ರಾಹುಲ್ ನಾಯಕ ತ್ವವನ್ನು ಪ್ರಶ್ನಿಸಿದ್ದರು. ಸೋನಿಯಾ ಶೇ.99 ಕಾರ್ಯ ಕರ್ತರಿಗೆ ನಾಯಕಿ. ಹಾಗಾಗಿ ಅವರೇ ಮುಂದುವರಿಯಬೇಕೆಂದಿದ್ದರು. ಸಂದೀಪ್ ಅಭಿಪ್ರಾಯಕ್ಕೆ ತಾಯಿ ಶೀಲಾ ದೀಕ್ಷಿತ್ ಕೂಡ ಇದೀಗ ದನಿಗೂಡಿಸಿದ್ದಾರೆ.