ಲಖನೌ: ಭಾರತ ನನಗೆ ಸಾಕಾಗಿದ್ದು, ದೇಶವನ್ನು ತೊರೆಯಲು ನಾನು ಸಿದ್ಧನಿದ್ದೇನೆ ಎಂದು ಉತ್ತರ ಪ್ರದೇಶ ಸಚಿವ ಅಜಂಖಾನ್ ಹೇಳಿದ್ದಾರೆ.
ಸದಾಕಾಲ ಒಂದಿಲ್ಲೊಂದು ವಿವಾದಗಳಿಂದಾಗಿಯೇ ಮಾಧ್ಯಮಗಳಲ್ಲಿ ಸುದ್ದಿಯಾಗುವ ಅಜಂಖಾನ್ ಈ ಬಾರಿ ದೇಶ ತೊರೆಯುವ ವಿಚಾರದಿಂದಾಗಿ ಮಾಧ್ಯಮಗಳ ಆಹಾರವಾಗಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅಜಂಖಾನ್, `ನನಗೆ ಭಾರತದಲ್ಲಿದ್ದು ಸಾಕಾಗಿದೆ. ಬೇರೆ ಯಾವುದಾದರೂ ದೇಶ ಆಶ್ರಯ ಕೊಟ್ಟರೆ ಅಲ್ಲಿ ಕುಟುಂಬ ಸದಸ್ಯರ ಜತೆ ಹಾಯಾಗಿ ಇರುತ್ತೇನೆ' ಎಂದು ಹೇಳಿದ್ದಾರೆ.
ನನ್ನಿಂದ ಭಾರತ ದೇಶಕ್ಕೆ ಯಾವುದೇ ತೊಂದರೆಯಾಗುವುದು ನನಗಿಷ್ಟವಿಲ್ಲ. ಹೀಗಾಗಿ ನಾನು ದೇಶ ತೊರೆಯುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಅಜಂಖಾನ್ ಹೇಳಿದ್ದಾರೆ. ಇತ್ತೀಚೆಗೆ ಅಜಂಖಾನ್ ಅವರ ಸ್ವಕ್ಷೇತ್ರ ರಾಮ್ ಪುರದಲ್ಲಿ ವಾಲ್ಮೀಕಿ ಜನಾಂಗದವರು ಮುಸ್ಲಿಂ ಧರ್ಮಕ್ಕೆ ಬಲವಂತವಾಗಿ ಮತಾಂತರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣದ ಹಿಂದೆ ಅಜಂಖಾನ್ ಅವರ ನೇರ ಕೈವಾಡವಿರುವ ಕುರಿತು ವಿಪಕ್ಷಗಳು ಆರೋಪ ಮಾಡಿದ್ದವು. ಈ ಹಿನ್ನಲೆಯಲ್ಲಿ ಅಜಂಖಾನ್ ಅವರು ಈ ಮಾತುಗಳನ್ನಾಡಿದ್ದಾರೆ ಎಂದು ಹೇಳಾಗುತ್ತಿದೆ.