ಕೊಲ್ಕತಾ ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರು ಅವರ ಅಂದಿನ ಸರ್ಕಾರ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಕುಟುಂಬದ ಮೇಲೆ ಸತತ 20 ವರ್ಷಗಳ ಕಾಲ ನಡೆಸಿದ್ದ ಬೇಹುಗಾರಿಕೆ ಹಾಗೂ ನೇತಾಜಿ ಕುರಿತ ಸುಮಾರು 64 ರಹಸ್ಯ ಕಡತಗಳು ಕೊಲ್ಕೊತಾದ ಬಿಗಿಭದ್ರತೆಯ ರಹಸ್ಯ ಲಾಕರ್‌ನೊಳಗಡಗಿವೆ ಎನ್ನಲಾಗಿದೆ.
ಕೊಲ್ಕತಾ ದ ಲಾರ್ಡ್ ಸಿನ್ಹಾ ರಸ್ತೆಯಲ್ಲಿ ರಾಜ್ಯ ಗೃಹ ಇಲಾಖೆಗೆ ಸೇರಿದ ಸ್ಪೆಷಲ್ ಬ್ರಾಂಚ್ ಕಚೇರಿಯಲ್ಲಿರುವ ಬಿಗಿಭದ್ರತೆಯ ಲಾಕರ್‌ನಲ್ಲಿದ್ದು, ಈ ಕಡತಗಳಲ್ಲಿ ಕೆಲವು ಅಂಶಗಳಿದ್ದ ಕಡತಗಳ ಮಾಹಿತಿ ಸೋರಿಕೆಯೇ ದೇಶದಲ್ಲಿ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿತ್ತು. ಇನ್ನುಳಿದ ಕಡತಗಳು ಬಹಿರಂಗಗೊಂಡರೆ ಅದೆಷ್ಟೋ ಸ್ಫೋಟಕ ಮಾಹಿತಿಗಳು ಹೊರಬರುವುದರಲ್ಲಿ ಸಂಶಯವೇ ಇಲ್ಲ ಎಂದು ನೇತಾಜಿ ಅವರ ಸೋದರ ಸಂಬಂಧಿ ಅಭಿಜಿತ್ ರಾಯ್ ಹೇಳಿದ್ದಾರೆ.
ನೇತಾಜಿ ಅವರ ನಿಗೂಢ ಕಣ್ಮರೆ ಇಲ್ಲವೇ ಸಾವಿನ ಕುರಿತ ಜಿಜ್ಞಾಸೆಗಳ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿ 'ಇಂಡಿಯಾಸ್ ಬಿಗ್ಗೆಸ್ಟ್ ಕವರ್ ಅಪ್' ಪುಸ್ತಕ ಹೊರತಂದಿರುವ ಸಂಶೋಧಕ ಅನುಜ್ ಧಾರ್ ಅವರೂ ಸಹ ನೇತಾಜಿ ಕುರಿತ 64 ಕಡತಗಳು ಈ ಲಾಕರ್‌ನೊಳಗಿವೆ ಎಂಬುದನ್ನು ಸ್ಪಷ್ಟಪಡಿಸಿದ್ದು, ಸುಭಾಶ್ ಚಂದ್ರ ಬೋಸ್ ಕಡತಗಳನ್ನು ಬಹಿರಂಗಗೊಳಿಸುವ ಸಂಬಂಧ ಈ ಹಿಂದೆ ನೇಮಕವಾಗಿದ್ದ ಮುಖರ್ಜಿ ಆಯೋಗವು ಸಹ ಇದನ್ನು ದೃಢೀಕರಿಸಿತ್ತು ಎಂದು ರಾಯ್ ತಿಳಿಸಿದ್ದಾರೆ.
2014ರ ಜನವರಿ 6ರಂದು ಕೋಲ್ಕೊತಾ ಮೂಲದ 'ಇಂಡಿಯಾಸ್ ಸ್ಮೈಲ್' ಎನ್‌ಜಿಒ ನೇತಾಜಿ ಹಾಗೂ ಅವರು ಸ್ಥಾಪಿಸಿದ್ದ ಐಎನ್‌ಎ ಸೇನೆಯ ಕುರಿತ ದಾಖಲೆಗಳನ್ನು ಬಹಿರಂಗಪಡಿಸಬೇಕೆಂದು ಕೋಲ್ಕೊತಾ ಹೈಕೋರ್ಟ್‌ನಲ್ಲಿ ದಾವೆ ಹೂಡಿತ್ತು.
ನಂತರ ಈ ರಹಸ್ಯ ಕಡತಗಳನ್ನು ಸಾರ್ವಜನಿಕಗೊಳಿಸಬೇಕೆಂಬ ಒತ್ತಾಯ ಹೆಚ್ಚಿದೆ. ಈ ಪ್ರಕರಣ ಸಂಬಂಧ ಎನ್‌ಜಿಒ ಗುರುವಾರ ಸಲ್ಲಿಸಿರುವ ಪೂರಕ ಅಫಿಡವಿಟ್‌ನಲ್ಲಿ ಪಶ್ಚಿಮ ಬಂಗಾಳ ಸರಕಾರದ ಗೃಹ ಇಲಾಖೆಯ ಸುಪರ್ದಿನಲ್ಲಿರುವ ಸ್ಪೆಷಲ್ ಬ್ರಾಂಚ್ ಕಚೇರಿಯಲ್ಲಿ 64 ಕಡತಗಳು ಇದ್ದು, ಅದನ್ನು ಬಹಿರಂಗಗೊಳಿಸಲು ನಿರಾಕರಿಸುತ್ತಿದೆ,'' ಎಂದು ದೂರಿದ್ದಾರೆ.