ದೇಶ

ನೇಪಾಳದಲ್ಲಿ ಪ್ರಬಲ ಭೂಕಂಪ: 1000 ದಾಟಿದ ಸಾವಿನ ಸಂಖ್ಯೆ

Vishwanath S

ಕಠ್ಮಂಡು: ನೆರೆ ರಾಷ್ಟ್ರ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪದ ಪರಿಣಾಮ ಒಂದು ಸಾವಿರಕ್ಕೂ ಮಂದಿ ಮೃತಪಟ್ಟಿರುವುದಾಗಿ ಇದೀಗ ತಿಳಿದುಬಂದಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂದು ನೇಪಾಳ ಪೊಲೀಸರು ಶನಿವಾರ ತಿಳಿಸಿದ್ದಾರೆ.

ನೇಪಾಳದಲ್ಲಿ ಸುಮಾರು 17 ಬಾರಿ ಕಂಪನದ ಅನುಭವವಾಗಿದೆ. ಭೂಕಂಪದಿಂದಾಗಿ ಹಲವಾರು ಕಟ್ಟಡಗಳು ಧರೆಗುರುಳಿದ್ದು, ಕಠ್ಮಂಡುವಿನ ಐತಿಹಾಸಿಕ ಕಟ್ಟಡ ಭೀಮ್ ಸೇನ್ ಟವರ್ ಕುಸಿದು ಬಿದ್ದಿದೆ. 15 ವರ್ಷದ ಬಾಲಕಿ ಸೇರಿದಂತೆ ಕಟ್ಟದ ಅವಶೇಷಗಳಡಿ ಸಿಲುಕಿ ಸುಮಾರು 400 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

19ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಭೀಮ್ ಸೇನ್ ಟವರ್ ಇದೀಗ ಪ್ರಬಲ ಭೂಕಂಪಕ್ಕೆ ನೆಲಸಮವಾಗಿಬಿಟ್ಟಿದೆ. ಕಳೆದ 10ವರ್ಷಗಳಿಂದ ಈ ಐತಿಹಾಸಿಕ ಟವರ್ ಗೆ ಭೇಟಿ ನೀಡಲು ಅವಕಾಶ ಮಾಡಿಕೊಡಲಾಗಿತ್ತು.

ಅವಶೇಷಗಳ ಅಡಿಯಿಂದ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿಗಳು ಹೊರತೆಗೆಯುತ್ತಿದ್ದಾರೆ. ಭೂಕಂಪನದಿಂದ ಭಾರತ ಹಾಗೂ ನೇಪಾಳದಲ್ಲಿ ಸಂಭವಿಸಿದ ಸಾವು, ನೋವು, ನಷ್ಟದ ಬಗ್ಗೆ ಇನ್ನಷ್ಟೇ ನಿಖರ ಮಾಹಿತಿ ಲಭ್ಯವಾಗಬೇಕಾಗಿದೆ.

ಕಾಠ್ಮಂಡುವಿನಲ್ಲಿ 7.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದರಿಂದ ಹಲವು ಕಟ್ಟಡಗಳು ನೆಲಸಮವಾಗಿವೆ. ಕಟ್ಟಡದ ಅವಶೇಷಗಳಡಿ ಹಲವಾರು ಜನರು ಸಿಲುಕಿರುವುದಾಗಿ ಶಂಕಿಸಲಾಗಿದೆ. ಸಾವಿರಾರು ಜನರು ರಕ್ಷಣೆಗಾಗಿ ಮೊರೆ ಇಡುತ್ತಿದ್ದಾರೆ ಎಂದು ಮಾಧ್ಯಮಗಳ ವರದಿ ಮಾಡಿವೆ. ಸಾವು, ನೋವು, ನಷ್ಟದ ಬಗ್ಗೆ ಇನ್ನಷ್ಟೇ ಸ್ಪಷ್ಟ ವಿವರ ತಿಳಿದು ಬರಬೇಕಾಗಿದೆ.

ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರಿ ಕಚೇರಿಯಿಂದ ಸಹಾಯವಾಣಿ ಆರಂಭಿಸಿದ್ದು, ಸಹಾಯಕ್ಕಾಗಿ 00977-9851135141, 00977-9851107021 ಸಂಪರ್ಕಿಸಬಹುದಾಗಿದೆ.

SCROLL FOR NEXT