ನೇಪಾಳ ಭೂಕಂಪದಿಂದಾಗಿ ಭಯಭೀತರಾದ ಮಹಿಳೆಯೊಬ್ಬರು ಕುಟುಂಬಸ್ಥರನ್ನು ಅಪ್ಪಿ ಚೀರುತ್ತಿರುವ ಚಿತ್ರ 
ದೇಶ

ಸಮೀಪದಲ್ಲೇ ಸಾವು ಹಾದು ಹೋದಂಗಾಯ್ತು!

ಮೃತ್ಯುಕೂಪ ಸಮೀಪಿಸಿದ್ದ ಇವರೆಲ್ಲ ಜಪಿಸಿದ್ದು ಮೃತ್ಯುಂಜಯ ಮಂತ್ರ. ಸಾವು ತಮ್ಮ ಸಮೀಪದಲ್ಲೇ ಹಾದು ಹೋದ ಆಘಾತ ಇವರಿಗೆಲ್ಲ. ಹರಹರ ಮಹಾದೇವ- ಹರಹರ ಮಹಾದೇವ ಮಂತ್ರ ಜಪಿಸಿಯೇ ಬದುಕಿದ್ದೇವೆಂಬ ಸಮಾಧಾನ. ಶನಿವಾರ ಮಟಮಟ ಮಧ್ಯಾಹ್ನದ ಆ ಕ್ಷಣ ನೆನೆದರೆ ಇವರಿಗೆಲ್ಲ...

ನವದೆಹಲಿ: ಮೃತ್ಯುಕೂಪ ಸಮೀಪಿಸಿದ್ದ ಇವರೆಲ್ಲ ಜಪಿಸಿದ್ದು ಮೃತ್ಯುಂಜಯ ಮಂತ್ರ. ಸಾವು ತಮ್ಮ ಸಮೀಪದಲ್ಲೇ ಹಾದು ಹೋದ ಆಘಾತ ಇವರಿಗೆಲ್ಲ. ಹರಹರ ಮಹಾದೇವ- ಹರಹರ ಮಹಾದೇವ ಮಂತ್ರ ಜಪಿಸಿಯೇ ಬದುಕಿದ್ದೇವೆಂಬ ಸಮಾಧಾನ. ಶನಿವಾರ ಮಟಮಟ ಮಧ್ಯಾಹ್ನದ ಆ ಕ್ಷಣ ನೆನೆದರೆ ಇವರಿಗೆಲ್ಲ ಹದಯ ಸ್ಥಬ್ತವಾದ ಅನುಭವ.

ನೇಪಾಳಕ್ಕೆ ತೆರಳಿ ಸಾವನ್ನು ಸಮೀಪಿಸಿ ವಾಪಸದ ಕರ್ನಾಟಕದ ಯಾತ್ರಿಗಳೆಲ್ಲರೂ ಹೇಳುವ ಮಾತೆಂದರೆ- ನಾವು ಜೀವಮಾನದಲ್ಲೆಂದೂ ಆಕ್ಷಣ ಮರೆಯೋಕೆ ಆಗೋದಿಲ್ಲ. ನಾವು ಬದುಕಿದ್ದೇ ಆ ದೇವರ ದಯೆ  ಮತ್ತು ಸೈನಿಕರ ಶ್ರಮದಿಂದ. ಕರ್ನಾಟಕದಿಂದ ನೇಪಾಳಕ್ಕೆ ತೆರಳಿದ್ದ ಸುಮಾರು 250 ಜನರ ಪೈಕಿ ಮೊದಲ ಶನಿವಾರ ತಡರಾತ್ರಿ ಹಾಗೂ ಭಾನುವಾರ ಬೆಳಗಿನ ಜಾವವೇ 60 ಜನರನ್ನು ದೆಹಲಿಗೆ ಕರೆತರಲಾಗಿದೆ.

ಅವರೆಲ್ಲ ಕರ್ನಾಟಕ ಭವನಕ್ಕೆ ಬಂದಾಗ ಬೆಳಗ್ಗಿ ಜಾವ ಎರಡೂವರೆ, ಮೂರು ಗಂಟೆ. ಆ ಹೊತ್ತಿಗೆ ಅವರಿಗೆಲ್ಲ ಊಟದ ವ್ಯವಸ್ಥೆ ಮಾಡಿದ್ದು ಕರ್ನಾಟಕ ಭವನದ ಅಧಿಕಾರಿಗಳು. ಊಟ ಮಾಡಿದ ನಂತರ ಯಾತ್ರಿಗಳು ಚೇತರಿಸಿಕೊಂಡದ್ದು. ಭಾನುವಾರ ಬೆಳಗ್ಗೆ ಕರ್ನಾಟಕ ಭವದಲ್ಲಿ ಉಪಹಾರ ಸೇವಿಸಿದ ನಂತರ ಮರಣ ಮೃದಂಗ ಬಾರಿಸಿದ ಶನಿವಾರದ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಆಕ್ಷಣ ನನ್ನ ಕಾಲು ಕಂಪಿಸುತ್ತಿತ್ತು, ಹೃದಯ ನಡುಗುತ್ತಿತ್ತು, ನನ್ನ ಪಕ್ಕದಲ್ಲೇ ಸಾವು ಹಾದು ಹೋದ ಅನುಭವವಾಯ್ತು ಎನ್ನುತ್ತಾರೆ ಉಷಾ ಕಿರಣ್.

ದೇವರ ಲೀಲೆ

ಸಾವು ಬಂದರೆ ಬರಲಿ ಅನ್ನೋ ನಿರ್ಧಾರಕ್ಕೆ ಬಂದಿದ್ದೆ ಆ ಕ್ಷಣದಲ್ಲಿ... ಮೊದಲ 20 ಸೆಕೆಂಡ್ ಭಯ ಇತ್ತು, ಬದುಕುವ ಆಸೆಯೇ ಇಲ್ಲದಾಗಿತ್ತು ಎನ್ನುತ್ತಾರೆ ವಿಜಯಲಕ್ಷ್ಮಿ. ಮುಕ್ತಿನಾಥ ದೇಗುಲ, ಶಿವನ ಗುಹೆ ನೋಡಿದೆವು. ಆಗಷ್ಟೆ ಪಶುಪತಿನಾಥ ದೇವಸ್ಥಾನದಲ್ಲಿ ದರ್ಶನ ಪಡೆದು ಹೊರಗೆ ಬಂದಿದ್ದೆವು. ಇದ್ದಕ್ಕಿದ್ದಂತೆ ಭೂಮಿ ಕಂಪಿಸಿತು. ಹಕ್ಕಿಗಳು ಹಾರಿ ಹೋದವು, ಕೋತಿಗಳು ಚೀರಿದವು, ಎಲ್ಲಾ ಚಲ್ಲಾಪಿಲ್ಲಿ... ಅದು ದೇವರ ಲೀಲೆಯೇನೋ ಅನಿಸಿತು. ನಮ್ಮೊಂದಿಗೆ ಇದ್ದ ಗೆಳತಿ ಷಾಪಿಂಗ್‍ಗೆ ಕರೆದರು, ಮತ್ತೊಬ್ಬ ಗೆಳತಿ ಇನ್ನೊಂದು ಪ್ರದಕ್ಷಿಣೆ ಹಾಕಿ ಬರುವುದಾಗಿ ಹೇಳಿದರು. ಅಲ್ಲೇ ಕುಳಿತೆವು. ಒಂದು ಕ್ಷಣ ನಾವು ಮುಂದೆ ಹೋಗಿದ್ದರೆ ಕಟ್ಟಡ ನಮ್ಮ ಮೇಲೆ ಬಿದ್ದಿರುತ್ತಿತ್ತು, ಮತ್ತೆ ಪ್ರದಕ್ಷಿಣೆ ಹಾಕಲು ಹೋದ ಗೆಳತಿಯಿಂದಾಗಿ ನಾವು ಬದುಕಿದೆವು ಎಂದು ನೆನಪಿಸಿಕೊಂಡರು.

ದೇವರ ದಯೆ ನಮ್ಮ ಮೇಲಿತ್ತು

ದೇವರ ದಯೆ ಮತ್ತು ಆಶೀರ್ವಾದದಿಂದ ಬದುಕಿ ಬಂದಿದ್ದೇವೆ ಅನ್ನುತ್ತಾರೆ ಜಾನಕಿ ರವೀಂದ್ರ. ಅವರಲ್ಲಿ ಆತಂಕ ಇನ್ನೂ ಹೋಗಿಲ್ಲ. ನಾವು ನೋಡಿ ಬಂದ ಸ್ಥಳದಲ್ಲಿದ್ದ ಕಟ್ಟಡಗಳೆಲ್ಲ ಕುಸಿದಿವೆ. ನಾವು ಅಲ್ಲೇ  ಇದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು ಎಂದು ನೆನೆದರೆ ಭಯವಾಗುತ್ತದೆ. ದೇವರ ಇಚ್ಛೆ ನಾವು ಬದುಕಿದೆವು. ಭಾರತೀಯ ವಾಯುಪಡೆ ಸೈನಿಕರು ನಮ್ಮನ್ನು ತುಂಬಾ ಚೆನ್ನಾಗಿ
ನೋಡಿಕೊಂಡರು. ಕೈ ಹಿಡಿದುಕೊಂಡು ಹೋಗಿ ವಿಮಾನದಲ್ಲಿ ಕೂರಿಸಿ, ಸಾಂತ್ವನ ಹೇಳಿದ್ರು, ಗಾಬರಿ ಆಗಬೇಡಿ ಅಂದ್ರು ದೆಹಲಿಗೆ ಕರೆತಂದರು, ದೆಹಲಿ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ಭವನದ ಅಧಿಕಾರಿಗಳು ಬೆಳಗಿನ ಜಾವ ಮೂರುಗಂಟೆಯಲ್ಲಿ ನಮಗೆ ಕಾಫಿ ಕೊಟ್ಟು ಉಪಚರಿಸಿದರು, ಎಲ್ಲರಿಗೂ ನಾವು ಋಣಿಗಳಾಗಿದ್ದೇವೆ ಎನ್ನುತ್ತಾರೆ ಅವರು.

ಫೋಟೋ ತೆಗೆಯುವ ಮುನ್ನ

ನಾನು ಪೋಟೋ ತೆಗೆಯಲು ನಿಂತಿದ್ದೆ, ಇದ್ದಕ್ಕಿದ್ದಂತೆ ಇಟ್ಟಿಗೆಗಳೆಲ್ಲ ಕುಸಿಯಲಾರಂಭಿಸಿದವು. ಧೂಳು ಮೇಲೆದ್ದಿತ್ತು. ಏನಾಗುತ್ತಿದೆ ಎಂಬುದೇ ಅರ್ಥವಾಗದಂತ ಸ್ಥಿತಿ ಎನ್ನುತ್ತಾರೆ ವತ್ಸಲಾ. ಮುಕ್ತಿನಾಥ, ಮನೋಕಾಮನದೇವಿ, ಪಶುಪತಿ ನಾಥ, ಜಲನಾರಾಯಣ ದರ್ಶನ ಮುಗಿಸಿ ಸರಿಯಾಗಿ 11.56ಕ್ಕೆ ನಾವು ಹೊರಗಡೆ ಫೋಟೋ ತೆಗೆಯಲು ನಿಂತಾಗ ಭೂಕಂಪವಾಯ್ತು. ಆ ಕ್ಷಣ ಎಲ್ಲರೂ ಆಘಾತ, ಆತಂಕದಿಂದ ಇದ್ದರೂ ಮೃತ್ಯುಂಜಯ ಮಂತ್ರ ಹೇಳ್ತಾ ಇದ್ದರು, ನಾವೂ ಮೃತ್ಯುಂಜಯ ಮಂತ್ರ ಹೇಳಿಕೊಂಡೆವು ಎಂದು ಆ ಕ್ಷಣ ನೆನಪಿಸಿಕೊಳ್ಳುತ್ತಾರೆ

ಪದೇ ಪದೆ ನಡುಗಿದ ಭೂಮಿ
ನಮ್ಮ ಎದುರಿಗೆ ಗಾಯಗೊಂಡವರನ್ನು ಕರೆದೊಯ್ಯುತ್ತಿದ್ದರು. ನಾವು ಬಯಲಲ್ಲಿ ಕುಳಿತಿದ್ದೆವು. ಪದೇ ಪದೆ ಭೂಮಿ ನಡುಗುತ್ತಿತ್ತು. ಮಧ್ಯಾಹ್ನ 2.15ರ ಹೊತ್ತಿಗೆ 13 ಸಲ ಭೂಮಿ ನಡುಗಿತ್ತು ಎನ್ನುತ್ತಾರೆ ಬೆಂಗಳೂರಿನ ಪ್ರೊ.ಚಂದ್ರಶೇಖರ್. ಭೂಕಂಪವಾದಾಗ ನಾನು ಒಬ್ಬನೆ ರೂಮಿನಲ್ಲಿದ್ದೆ. ಅನಾರೋಗ್ಯದ ಕಾರಣ ಹೊರ ಹೋಗಿರಲಿಲ್ಲ. ಆಗ ಹೊರಗೆ ಹೋದವರ ಅವಸ್ತೆ ಏನು ಅಂತ ನೆನೆದು ಭಯವಾಯ್ತು, ಕೆಲ ಹೊತ್ತಿನಲ್ಲೇ ಆ್ಯಂಬ್ಯುಲೆನ್ಸ್ ಗಳು ಶವ ಮತ್ತು ಗಾಯಾಳುಗಳನ್ನು ತಗೆದುಕೊಂಡು ಹೋಗುತ್ತಿದ್ದವು. ಪಶುಪತಿನಾಥ ದೇವಾಲಯದ ಮುಂದಿನ ಬಯಲಲ್ಲಿ ಸಾವಿರಾರು ಜನ ಸೇರಿದ್ದೆವು, ಮೊಬೈಲ್ ನೆಟ್‍ವರ್ಕ್ ಇಲ್ಲ, ಊಟ ಇಲ್ಲ, ತಿಂಡಿ ನೀರೂ ಇಲ್ಲದ ಪರಿಸ್ಥಿತಿ, ನಿನ್ನೆ ಟಿಫನ್ ಮಾಡಿದ್ದು, ಕರ್ನಾಟಕ ಭವನಕ್ಕೆ ಬಂದಮೇಲೆ ಬೆಳಗಿನ ಜಾವ 4 ಗಂಟೆಗೆ ಊಟ ಮಾಡಿದ್ದು ಎಂದು ಮೆಲುಕು ಹಾಕಿದರು.


ಭೂಮಿ ಬಾಯ್ಬಿಟ್ಟ ಅನುಭವ
ನಾವು ಬುದ್ಧ ಸ್ತೂಪದ ಬಳಿ ನಿಂತಿದ್ವಿ ಭೂಮಿ ಗಡಗಡ ಅಂತು ಎಲ್ಲ ಅಲ್ಲೋಲಕಲ್ಲೋಲ. ಏನಾಗ್ತಿದೆ ಅನ್ನೋದು ಗೊತ್ತಾಗ್ಲಿಲ್ಲ. ಭೂಮಿ ಬಾಯ್ಬಿಟ್ಟಂತಹ ನುಭವ ಎಂದು ವಿವರಿಸಿದ್ದು
ಬೆಂಗಳೂರಿನ ಸುಧಾಮಣಿ. ನಾವು ವಾರಾಣಸಿಯಿಂದ ನೇಪಾಳಕ್ಕೆ ವಿಮಾನದಲ್ಲಿ ಬೆಳಗ್ಗೆ ಬಂದೆವು, ದೇವಸ್ಥಾನಗಳನ್ನು ನೋಡಿದ ಬುದ್ಧ ಸ್ತೂಪದ ಕಡೆ ಹೋಗಿ ನಿಂತಿದ್ವಿ. ಅಲ್ಲಿಯೇ
ಕೆಲವರು ಷಾಪಿಂಗ್ ಮಾಡ್ತಾ ಇದ್ದರು. ಆಗ ಭೂಮಿ ಗಢಗಢಗಢ ಅಂತು, ತಕ್ಷಣ ಎರಡು ಮೂರು ಸೆಕೆಂಡ್ ಏನೂ ಗೊತ್ತಾಗಿಲ್ಲ. ಕೆಲ ಕ್ಷಣಗಳ ನಂತರ ಭೂಕಂಪ ಅನ್ನಿಸ್ತು. ಆಗ ಇದ್ದಕ್ಕಿದ್ದ ಹಾಗೆ ಹರಹರ ಮಹಾದೇವ್ ಹರಹರ ಮಹಾದೇವ್ ಎಂಬ ಮಂತ್ರ ಘೋಷಣೆ ಕೇಳಿಬಂತು.

ಎಲ್ಲರೂ ಪರಿಕ್ರಮ ಮಾಡೋ ಜಾಗದಲ್ಲಿ ನಿಂತುಕೊಂಡ್ವಿ, ಭೂಮಿ ನಡುಗುತ್ತಲೇ ಇತ್ತು. ದೋಣಿಯಲ್ಲಿ ತೇಲಿದ ಅನುಭವ, ಎಲ್ಲ ತಗೊಂಡ್ವಿ, ಇಲ್ಲೇ ಏರೋಪ್ಲೇನ್ ಲ್ಯಾಂಡ್ ಆದ ಅನುಭವ. ಏನಾಯ್ತು ಏನು ಮಾಡಲೂ ತೋಚದ ಸ್ಥಿತಿ. ಅಂಗಡಿಯವರೆಲ್ಲ ಮುಖ್ಯ ರಸ್ಗೆಗೆ ಬಂದರು. ಬುದ್ಧ ಸ್ತೂಪದ ಬಳಿ ಹರ ಹರ ಮಹಾದೇವ್ ಘೋಷಣೆ ಮೊಳಗುತ್ತಲೇ ಇತ್ತು. ಕೆಲ ಕ್ಷಣಗಳ ನಂತರ ಮತ್ತೆ ಭೂಮಿ ಕಂಪಿಸಿತು. ಮುಖ್ಯ ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದವರು ಬಿದ್ದು ಗಾಯಗೊಂಡರು, ರಸ್ತೆ ದಾಟುತ್ತಿದ್ದವರು ರಸ್ತೆ  ಮಧ್ಯೆಯೇ ಜಾರಿ ಬಿದ್ದರು. ನಮ್ಮ ಬಸ್ ಇರುವ ಸ್ಥಳಕ್ಕೆ ತಲುಪುವುದೇ ದೊಡ್ಡ ಕಷ್ಟವೆನಿಸಿತ್ತು. ಎಲ್ಲಿ ನೋಡಿದ್ರೂ ಗಾಬರಿಗೊಂಡ ಜನರೇ...ದೇವರಲ್ಲಿ ಭಯ ಭಕ್ತಿ, ಶ್ರದ್ಧೆ, ನಂಬಿಕೆ ಇತ್ತು. ಮೃತ್ಯುಂಜಯ ಮಂತ್ರ ಹೇಳಿ ಬದುಕಿಕೊಂಡೆವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT