ನವದೆಹಲಿ: ಮೋದಿ ಸರ್ಕಾರಕ್ಕೆ ಪ್ರತಿಷ್ಠೆ ವಿಧೇಯಕ ಅಂಗೀಕಾರಕ್ಕೆ ಸಂಸತ್‍ನ ಜಂಟಿ ಅಧಿವೇಶನ ಕರೆಯುವ ಸಾಧ್ಯತೆ ತಳ್ಳಿಹಾಕಿಲ್ಲ ಕೇಂದ್ರ ಸರ್ಕಾರ. ಇಂಥ ಒಂದು ಸುಳಿವು ನೀಡಿದ್ದು ಹಣಕಾಸು ಸಚಿವ ಅರುಣ್ ಜೇಟ್ಲಿ.
ಸಂದರ್ಶನದಲ್ಲಿ ಮಾತನಾಡಿದ ಅವರು ಸರ್ಕಾರದ ಮೊದಲ ಆದ್ಯತೆ ರಾಜ್ಯಸಭೆಯಲ್ಲಿ ಅದನ್ನು ಅಂಗೀಕರಿಸಲು ಪ್ರಯತ್ನಿಸಲಾಗುತ್ತದೆ ಎಂದಿದ್ದಾರೆ. ಒಂದು ವೇಳೆ ಇದೇ ವಿಚಾರಕ್ಕೆ ಜಂಟಿ ಅಧಿವೇಶನ ಕರೆದರೂ ಇದೇನೂ ಮೊದಲ ಅಥವಾ ಕೊನೆಯ ಬಾರಿ ಅಲ್ಲವಲ್ಲ ಎಂದು ಪ್ರಶ್ನಿಸಿದರು.
ಸಿಗಲಿದೆ ಹೆಚ್ಚು ಪರಿಹಾರ: ಭಾರಿ ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರ ಕಣ್ಣೀರನ್ನು ಕೇಂದ್ರ ಒರೆಸಲಿದೆ. ಹಿಂದಿನ ಯುಪಿಎ ಸರ್ಕಾರಕ್ಕಿಂತ ಹೆಚ್ಚಿನ ಪರಿಹಾರವನ್ನು
ಶೀಘ್ರವೇ ನೀಡುತ್ತೇವೆ. ಕೃಷಿ ಕ್ಷೇತ್ರ ಅನುಭವಿಸುತ್ತಿರುವ ನೀರಾವರಿ ಸಮಸ್ಯೆಗೆ ತಕ್ಷಣಕ್ಕೆ ಪರಿಹಾರ ಕಲ್ಪಿಸಲಾಗದು. ಅದಕ್ಕೆ ದೀರ್ಘಾವಧಿಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ. ತಾತ್ಕಾಲಿಕ ಕ್ರಮದಿಂದ ಏನೇನೂ ಲಾಭವಿಲ್ಲ ಎಂದಿದ್ದಾರೆ ಅರುಣ್ ಜೇಟ್ಲಿ. ಬಾಡಿಗೆಯ ಕಾರಣಗಳು: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಳೆದ ಕೆಲ ದಿನಗಳಿಂದ ಸಕ್ರಿಯವಾಗಿರುವುದನ್ನು ಜೇಟ್ಲಿ ಲೇವಡಿ ಮಾಡಿದ್ದಾರೆ. ಅವರು ಕಾರಣಗಳನ್ನು ಬಾಡಿಗೆಗೆ ತೆಗೆದುಕೊಂಡಂತೆ ಮಾತನಾಡುತ್ತಿದ್ದಾರೆ. ಹೀಗಾಗಿ, ಕಾಂಗ್ರೆಸ್ ಉಪಾಧ್ಯಕ್ಷ ರಾಜಕೀಯದಲ್ಲಿ ಹೊಂದಿರುವ ನಿಷ್ಠೆ ಪ್ರಶ್ನಿಸಿದ್ದಾರೆ.