ದೇಶ

ಭಾರತದಲ್ಲಿ ಭೂಕಂಪ ಊಹೆ ಅಸಾಧ್ಯ ಗಾಳಿಸುದ್ದಿ ನಂಬಬೇಡಿ

ನವದೆಹಲಿ: ನೇಪಾಳ ದುರಂತದ ಬೆನ್ನಲ್ಲೇ `ಶೀಘ್ರ ಭಾರತದಲ್ಲಿ ಅತ್ಯಂತ ಭೀಕರ ಭೂಕಂಪವೊಂದು ಸಂಭವಿಸಲಿದೆ' ಎಂಬ ಗಾಳಿಸುದ್ದಿಗಳು ಹರಿದಾಡಲಾರಂಭಿಸಿವೆ. ಇದು ಭಾರತೀಯರನ್ನು ಆತಂಕಕ್ಕೀಡುಮಾಡಿದೆ. ಆದರೆ, ಭೂಕಂಪನವನ್ನು ಅಧ್ಯಯನ ಮಾಡುವ ವಿಜ್ಞಾನಿಗಳು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ.

ಭೂಕಂಪದಂತಹ ಪ್ರಾಕೃತಿಕ ವಿಕೋಪ ಯಾವಾಗ ಮತ್ತು ಎಷ್ಟು ತೀವ್ರತೆಯಲ್ಲಿ ಸಂಭವಿಸುತ್ತದೆ ಎಂಬ ಬಗ್ಗೆ ಭವಿಷ್ಯ ನುಡಿಯುವ ವಿಧಾನ ಸದ್ಯಕ್ಕೆ ಯಾರ ಬಳಿಯೂ ಇಲ್ಲ. ಭೂಕಂಪದ ಸಾಧ್ಯಾಸಾಧ್ಯತೆಯನ್ನು ಊಹಿಸಬಹುದೇ ವಿನಾ ಸ್ಪಷ್ಟ ದಿನಾಂಕವನ್ನು ಹೇಳಲು ಸಾಧ್ಯವೇ ಇಲ್ಲ. ಇದು ಕೇವಲ ಜನರನ್ನು ಮೂರ್ಖರನ್ನಾಗಿಸುವ ತಂತ್ರ ಎಂದು ಯುನೈಟೆಡ್ ಸ್ಟೇಟ್ಸ್ ಜಿಯಾಲಜಿಕಲ್ ಸರ್ವೇ(ಯುಎಸ್‍ಜಿಎಸ್) ಹೇಳಿದೆ.

ಊಹಿಸಲು ಸಾಧ್ಯವೇ ಇಲ್ಲ:

ಭೂಕಂಪದ ಬಗ್ಗೆ ಮೊದಲೇ ಅರಿಯುವಂತಹ ವಿಧಾನಗಳನ್ನು ಕಂಡುಹಿಡಿಯಲು ಬಹಳಷ್ಟು ಪ್ರಯತ್ನಗಳು ನಡೆದಿವೆ. ಆದರೆ ಅವು ಯಶಸ್ವಿಯಾಗಿಲ್ಲ ಎಂದಿದ್ದಾರೆ ವಿಜ್ಞಾನಿಗಳು. ಯುರೇಷಿಯನ್ ಮತ್ತು ಇಂಡಿಯನ್ ಫಲಕಗಳು ಸಂಧಿಸುವ ಹಿಮಾಲಯದಂತಹ ಸಕ್ರಿಯ ಭೂ ಪ್ರದೇಶಗಳಲ್ಲಿ ಪ್ರಬಲ ಭೂಕಂಪಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ಅದು ಯಾವಾಗ, ಹೇಗೆ, ಎಷ್ಟು ತೀವ್ರತೆಯಲ್ಲಿ ಸಂಭವಿಸಬಹುದು ಎಂಬುದನ್ನು ಹೇಳಲಾಗದು. ಹಾಗಾಗಿ ಭಾರತದಲ್ಲಿ ಭಯಾನಕ ಭೂಕಂಪ ಆಗಲಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ಯಾರೂ ನಂಬಬೇಕಾಗಿಲ್ಲ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.

SCROLL FOR NEXT