ಮಹಿಳಾ ದೌರ್ಜನ್ಯ ವಿರೋಧಿ ಚಳುವಳಿ 
ದೇಶ

ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಮಗಳ ಶವ ಸಂಸ್ಕಾರ ಇಲ್ಲ: ನೊಂದ ತಂದೆ

ಬಸ್ ನಲ್ಲಿ ಲೈಂಗಿಕ ಕಿರುಕುಳ ನೀಡಿ ಬಾಲಕಿ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು ಡಿಸಿಎಂ ಸುಖ್ ಬೀರ್ ವಿರುದ್ಧ ಪ್ರಕರಣ ದಾಖಲಿಸುವಂತೆ...

ಮೋಗಾ (ಪಂಜಾಬ್): ಬಸ್ ನಲ್ಲಿ ಲೈಂಗಿಕ ಕಿರುಕುಳ ನೀಡಿ ಬಾಲಕಿ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು ಪಂಜಾಬ್ ಉಪಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್ ವಿರುದ್ಧ ಪ್ರಕರಣ ದಾಖಲಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಲೈಂಗಿಕ ಕಿರುಕುಳ ನೀಡುತ್ತಿದ್ದ ವೇಳೆ ಚಲಿಸುತ್ತಿದ್ದ ಬಸ್ ನಿಂದ ಹಾರಿದ 14 ವರ್ಷದ ಬಾಲಕಿ ಸಾವನ್ನಪ್ಪಿದ್ದು, ಬಾಲಕಿ ತಾಯಿ ಆರೋಗ್ಯ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಘಟನೆ ಕುರಿತಂತೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಬಾಲಕಿಯ ತಂದೆ ನಮಗೆ ನ್ಯಾಯ ಬೇಕು. ಆ ಬಸ್ ಉಪ ಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್ ಅವರದ್ದಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಕೇಳಿದ್ದಾರೆ. ಅಲ್ಲದೆ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ತಮ್ಮ ಮಗಳ ಅಂತಿಮ ಸಂಸ್ಕಾರ ಮಾಡುವುದಿಲ್ಲ ಎಂದು ಬಾಲಕಿ ತಂದೆ ಪಟ್ಟು ಹಿಡಿದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಸ್ ಸಂಸ್ಥೆಯ ಮಾಲೀಕ ಮತ್ತು ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್ ಅವರು, ಘಟನೆ ಆಘಾತಕಾರಿಯಾಗಿದ್ದು, ಬಾಲಕಿ ಸಾವಿಗೆ ವಿಷಾಧ ವ್ಯಕ್ತಪಡಿಸುತ್ತೇನೆ. ಆದರೆ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಹೇಳಿದ್ದಾರೆ.

ಇನ್ನು ಪ್ರಕರಣ ನಡೆದ 15 ಗಂಟೆಗಳ ಬಳಿಕ ಪಂಜಾಬ್ ಪೊಲೀಸರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದವರನ್ನು ಬಂಧಿಸಿದ್ದಾರೆ. ಬಸ್ ಕಂಡಕ್ಟರ್ ಸುಖ್ಮೀಂದರ್ ಸಿಂಗ್, ಕ್ಲೀನರ್ ಗುರ್ದೀಪ್ ಸಿಂಗ್, ಬಸ್ ಚಾಲಕ ರಂಜಿತ್ ಸಿಂಗ್ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿರುವ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 307 (ಹತ್ಯಾ ಪ್ರಯತ್ನ), 354 (ಮಹಿಳೆ ವಿರುದ್ಧ ದೌರ್ಜನ್ಯ), 34 (ಸಾಮಾನ್ಯ ಅಪರಾಧ ಉದ್ದೇಶ)ದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬಾಲಕಿ ಕುಟುಂಬಕ್ಕೆ ಪರಿಹಾರ
ಇನ್ನು ಮೃತ ಬಾಲಕಿಗೆ ಪಂಜಾಬ್ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು, ಬಾಲಕಿ ಕುಟುಂಬಕ್ಕೆ 20 ಲಕ್ಷ ರುಪಾಯಿ ಪರಿಹಾರ ಧನ ನೀಡಲು ಮುಂದಾಗಿದೆ. ಅಲ್ಲದೆ ಬಾಲಕಿಯ ತಂದೆಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ಕೂಡ ನೀಡಿದೆ. ಆದರೆ ಸರ್ಕಾರದ ಪರಿಹಾರವನ್ನು ತಿರಸ್ಕರಿಸಿರುವ ಬಾಲಕಿ ಪೋಷಕರು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಈ ಪ್ರಕರಣ ಮಾಧ್ಯಮಗಳಲ್ಲಿ ಭಾರಿ ಸುದ್ದಿ ಗೆ ಗ್ರಾಸವಾಗುತ್ತಿರುವಂತೆಯೇ ಪಂಜಾಬ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಭಾರಿ ಟೀಕಾ ಪ್ರಹಾರವನ್ನೇ ಹರಿಬಿಡುತ್ತಿವೆ. ಪ್ರಮುಖವಾಗಿ ಬಸ್ ಸಂಸ್ಥೆಯ ಮಾಲೀಕರಾದ ಉಪಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್ ಅವರು ಘಟನೆಯ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸುತ್ತಿವೆ.

ಒಟ್ಟಾರೆ ಬಸ್ ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣವಾದ ಅಮಾನವೀಯ ಘಟನೆ ಇದೀಗ ಪಂಜಾಬ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರದಲ್ಲಿ NI-MO ಮೋಡಿ: NDA ಪ್ರಚಂಡ ಗೆಲುವು; ಅತಿದೊಡ್ಡ ಪಕ್ಷವಾಗಿ BJP; ಕುಸಿದ ತೇಜಸ್ವಿ ಯಾದವ್; Congress ಸ್ಥಿತಿ ಹೀನಾಯ!

Bihar Election Results 2025: 'ಮಹಿಳೆಯರಿಗೆ 10 ಸಾವಿರ ರೂ', ನಿತೀಶ್ ಕುಮಾರ್, NDA ಪ್ರಚಂಡ ಗೆಲುವಿಗೆ ಕಾರಣವಾದ ಅಂಶಗಳು

2028ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಬಿಹಾರ ರೀತಿ ಫಲಿತಾಂಶ ಮರುಕಳಿಸಲಿದೆ: ಎಚ್‌ಡಿ ಕುಮಾರಸ್ವಾಮಿ ಭವಿಷ್ಯ

ಕಬ್ಬು ಬೆಳೆಗೆ ಬೆಂಕಿ: 'ಪೂರ್ವ ಯೋಜಿತ ಕೃತ್ಯ'.. ದುಷ್ಕರ್ಮಿಗಳಿಗಾಗಿ ಪೊಲೀಸರ ತೀವ್ರ ಶೋಧ

ಬಿಹಾರ ಚುನಾವಣೆ 2025: ಸೋತು ಗೆದ್ದ ತೇಜಸ್ವಿ ಯಾದವ್; ಕುಟುಂಬದ ಭದ್ರಕೋಟೆ ರಾಘೋಪುರ್ ಉಳಿಸಿಕೊಳ್ಳಲು ಸುಸ್ತೋ ಸುಸ್ತು!

SCROLL FOR NEXT