ನವದೆಹಲಿ: ಬಿಬಿಎಂಪಿ ಚುನಾವಣೆ ಸಂಬಂಧ ಕರ್ನಾಟಕ ಹೈಕೋರ್ಟ್‍ನ ವಿಭಾಗೀಯ ಪೀಠ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಬಿಬಿಎಂಪಿ ಚುನಾವಣೆ ಮುಂದೂಡಲು ಅವಕಾಶ ಮಾಡಿಕೊಟ್ಟಿರುವ ರಾಜ್ಯ ಹೈಕೋರ್ಟ್ ಆದೇಶ ರದ್ದುಗೊಳಿಸಬೇಕೆಂದು ಬಿಜೆಪಿ ಪಾಲಿಕೆ ಸದಸ್ಯರಾದ ಸಿ.ಕೆ.ರಾಮಮೂರ್ತಿ ಮತ್ತು ಸೋಮಶೇಖರ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆಗೆತ್ತಿ ಕೊಂಡಿರುವ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು, ನ್ಯಾಯಮೂರ್ತಿ ಅರುಣ್ ಮಿಶ್ರಾ ಮತ್ತು ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರಿದ್ದ ತ್ರಿಸದಸ್ಯ ಪೀಠವು ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ವಿಚಾರಣೆಯನ್ನು ಮೇ 5ಕ್ಕೆ ಮುಂದೂಡಿದೆ.
ಕರ್ನಾಟಕ ಸರ್ಕಾರದ ಪರವಾಗಿ ಕಪಿಲ್ ಸಿಬಲ್, ಪಾಲಿಕೆ ಸದಸ್ಯರ ಪರವಾಗಿ ದುಷ್ಯಂತ್ ದವೆ ವಾದಿಸಿದರು. ಮೇ 30ರೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಏ.24ರಂದು ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ಎಚ್.ವಘೇಲಾ ಮತ್ತು ನ್ಯಾಯಮೂರ್ತಿ ರಾಮಮೋಹನ್ ರೆಡ್ಡಿ ಅವರಿದ್ದ ಪೀಠವು ರದ್ದು ಮಾಡಿತ್ತು. ಜತೆಗೆ ಸಂವಿಧಾನದ 74ನೇ ತಿದ್ದುಪಡಿಗೆ ಅನುಗುಣವಾಗಿ ಚುನಾವಣೆ ನಡೆಸುವಂತೆಯೂ ಆದೇಶ ನೀಡಿತ್ತು. ಆದರೆ, ಚುನಾವಣೆಗೆ ಕಾಲಮಿತಿ ವಿಧಿಸಿರಲಿಲ್ಲ.