ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ(ಐಎಸ್‍ಐಎಸ್) ಮತ್ತಿತರ ಭಯೋತ್ಪಾದನಾ ಸಂಘಟನೆಗಳು ಭಾರತೀಯ ಅಲ್ಪಸಂಖ್ಯಾತ ಯುವಕರನ್ನು ಆಕರ್ಷಿಸಲು ಯತ್ನಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಅವುಗಳ ಪ್ರಭಾವ ತಡೆಯುವ ನಿಟ್ಟಿನಲ್ಲಿ ಸಮಗ್ರ ರಾಷ್ಟ್ರೀಯ ನೀತಿ ರೂಪಿಸಲು ಮುಂದಾಗಿದೆ.
ಅಂತರ್ಜಾಲದ ಮೂಲಕ ಯುವಕರು ಐಎಸ್ ಐಎಸ್ ಪ್ರಭಾವಕ್ಕೆ ಒಳಗಾಗುವ ಶಂಕೆ ಇರುವ ಹಿನ್ನೆಲೆಯಲ್ಲಿ ಅಂತಹ ಪ್ರಭಾವಗಳಿಂದ ಯುವ ಜನತೆಯನ್ನು ದೂರವಿಡಲು ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ಚರ್ಚಿಸಲು ಶನಿವಾರ ಕೇಂದ್ರ ಗೃಹ ಸಚಿವಾಲಯ ಪ್ರಮುಖ ರಾಜ್ಯಗಳ ಗೃಹ ಕಾರ್ಯದರ್ಶಿ ಹಾಗೂ ಡಿಐಜಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿತು.
ಉಗ್ರ ಸಂಘಟನೆಗಳಿಂದ ಯುವಜನತೆಯನ್ನು ದೂರವಿಡುವ ನಿಟ್ಟಿನಲ್ಲಿ ಈ ಸಭೆ ಮಹತ್ವದ ಮೊದಲ ಹೆಜ್ಜೆ ಎನ್ನಲಾಗಿದ್ದು, ಸಭೆಯಲ್ಲಿ ಕರ್ನಾಟಕವೂ ಸೇರಿ 10ಕ್ಕೂ ಹೆಚ್ಚು ರಾಜ್ಯಗಳು ಭಾಗವಹಿಸಿದ್ದವು. ಅಧಿಕೃತ ಹೇಳಿಕೆಯಲ್ಲಿ ಕೇಂದ್ರ ಸರ್ಕಾರ, ದೇಶದ 11 ಯುವಕರು ಐಎಸ್‍ಐಎಸ್ ಸೇರಿರುವುದಾಗಿ ಹೇಳಿದ್ದರೂ, ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ವ್ಯವಸ್ಥೆಯ ಬಲಿಪಶುವಾದ ಭಾವನೆ ಅಥವಾ ಮುಖ್ಯವಾಹಿನಿಯಿಂದ ಹೊರಗುಳಿದ ಭಾವನೆಗಳು ದೇಶದ ಅಲ್ಪಸಂಖ್ಯಾತ ಸಮುದಾಯದ ಯುವಕರಲ್ಲಿ ಉಂಟಾಗದಂತೆ ಅವರಿಗೆ ಸೂಕ್ತ ಮತ್ತು ಸಕಾಲಿಕ ಸಮುದಾಯ ನೆರವು ನೀಡುವುದು, ಸಮುದಾಯ ನಾಯಕರೊಂದಿಗೆ ನಿರಂತರ ಸಂಪರ್ಕ ಸಭೆ ಹಾಗೂ ಅಲ್ಪಸಂಖ್ಯಾತ ಸಮುದಾಯದ ಅನುಮಾನಾಸ್ಪದ ಯುವಕರ ಜಾಲತಾಣ,ಅಂತರ್ಜಾಲ ಹುಡುಕಾಟ ಮೇಲೆ ಕಣ್ಣಿಡುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ. ಅಮೆರಿಕವನ್ನು ಕೆಣಕುವ ನಿಟ್ಟಿನಲ್ಲಿ ಐಎಸ್‍ಐಎಸ್ ಭಾರತದ ಮೇಲೆ ದಾಳಿ ನಡೆಸಲು ಸಂಚುಮಾಡಿದೆ ಎಂಬ ಇತ್ತೀಚಿನ ವರದಿಗಳ ಹಿನ್ನೆಲೆಯಲ್ಲಿ ಸರ್ಕಾರದ ಶನಿವಾರದ ಸಭೆ ಮಹತ್ವ ಪಡೆದುಕೊಂಡಿದೆ.