ನವದೆಹಲಿ: ಬಿ. ಆರ್ ಚೋಪ್ರಾ ಅವರ ಮಹಾಭಾರತ ಟೀವಿ ಧಾರವಾಹಿಯಲ್ಲಿ ಯುಧಿಷ್ಟಿರನಾಗಿ ಅಭಿನಯಿಸಿದ್ದ ಕಾರಣ ಗಜೇಂದ್ರ ಚೌಹಾಣ್ ಅವರನ್ನು ಪುಣೆ ಫಿಲ್ಮ್ ಇನ್ಸಿಟ್ಯೂಟ್ ( FTII )ಅಧ್ಯಕ್ಷರನ್ನಾಗಿ ಮಾಡಲಾಯಿತು- ಹೀಗೆಂದು ಉತ್ತರಿಸಿದ್ದು ಮಾಹಿತಿ ಮತ್ತು ಪ್ರಸಾರಾಂಗ ಸಚಿವಾಲಯ!
ಗಜೇಂದ್ರ ಚೌಹಾಣ್ ಅವರಿಗೆ ಪ್ರತಿಷ್ಠಿತ ಪುಣೆ ಫಿಲ್ಮ್ ಇನ್ಸಿಟ್ಯೂಟ್ ಅಧ್ಯಕ್ಷ ಸ್ಥಾನ ಕೊಟ್ಟಿದ್ದು ಯಾಕೆ ಎಂದು ಆರ್ಟಿಐ ಪ್ರಶ್ನೆ ಕೇಳಿದ್ದಕ್ಕೆ ಮಾಹಿತಿ ಮತ್ತು ಪ್ರಸಾರಾಂಗ ಸಚಿವಾಲಯ ಈ ರೀತಿಯ ಉತ್ತರ ನೀಡಿದೆ.
ಚೌಹಾಣ್ ಅವರು ಮಹಾಭಾರತ ಧಾರವಾಹಿಯಲ್ಲಿ ಯುಧಿಷ್ಠಿರನಾಗಿ ಅಭಿನಯಿಸಿದ್ದಾರೆ. 150ಕ್ಕಿಂತಲೂ ಹೆಚ್ಚು ಸಿನಿಮಾಗಳಲ್ಲಿ, 600ಕ್ಕಿಂತಲೂ ಹೆಚ್ಚು ಧಾರವಾಹಿಗಳಲ್ಲಿ ಪಾತ್ರ ಮಾಡಿದ್ದಾರೆ. ಇದಿಷ್ಟೇ ಚೌಹಾಣ್ ಅವರ ಬಯೋಡಾಟಾದಲ್ಲಿ ಇರುವ ಮಾಹಿತಿ. ಆರ್ಟಿಐ ಯಲ್ಲಿ ಚೌಹಾಣ್ರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಯಾಕೆ ಎಂದು ಪ್ರಶ್ನೆ ಕೇಳಿದಾಗ ಸಿಗುವ ಉತ್ತರವೂ ಇಷ್ಟೇ ಆಗಿದೆ.
ಅಡೂರ್ ಗೋಪಾಲಕೃಷ್ಣನ್, ಅಮಿತಾಬ್ ಬಚ್ಚನ್, ರಜನೀಕಾಂತ್, ವಿನೋದ್ ಚೋಪ್ರಾ ಮೊದಲಾವರು ಪುಣೆ ಫಿಲ್ಮ್ ಇನ್ಸಿಟ್ಯೂಟ್ನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಅಂಥಾ ಸಾಧಕರು ಕುಳಿತುಕೊಂಡ ಅಧ್ಯಕ್ಷ ಸ್ಥಾನಕ್ಕೆ ಗಜೇಂದ್ರ ಚೌಹಾಣ್ ರನ್ನು ಆಯ್ಕೆ ಮಾಡಲು ಕಾರಣಗಳೇನು ? ಎಂಬುದರ ಬಗ್ಗೆ ಭಾರಿ ಪ್ರಶ್ನೆಗಳೆದ್ದಿದ್ದವು.